ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 7 ವರ್ಷಗಳಿಂದ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನಾಳೆ ಮುಕ್ತಾಯಗೊಳ್ಳಲಿದೆ. ಈ ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸುತ್ತಿರುವ ಹುಡುಗನ ಹೆಸರು ಚಂದು ಬಿ. ಗೌಡ
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಒಂದು ಸುಂದರ ಪಯಣ. ಈ ಧಾರಾವಾಹಿ ನನಗೆ ಸಾಕಷ್ಟು ನೀಡಿದೆ. ನಾನಿಂದು ನಾಯಕನಟನಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಮೂಲ ಕಾರಣವೇ ಈ ಧಾರಾವಾಹಿ. ಈ ಸೀರಿಯಲ್ನಲ್ಲಿ ನಟನಾಗಿ ಕಾಣಿಸಿಕೊಂಡ ಮೇಲೆ ನಾನು ನಾಲ್ಕು ಸಿನಿಮಾಗಳಲ್ಲಿ ನಾಯನಾಗಿ ಅಭಿನಯಿಸಿದೆ. ಜೊತೆಗೆ ಈ ಧಾರಾವಾಹಿಯಿಂದ ಜನರ ಪ್ರೀತಿಯೂ ದೊರೆಯಿತು. ಜೈ ಮಾತಾ ಕಂಬೈನ್ಸ್ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ತಮ್ಮ ಕಿರುತೆರೆ ಪಯಣವನ್ನು ವಿವರಿಸುತ್ತಾರೆ ಚಂದು ಗೌಡ. ಸಿನಿಮಾ ಮತ್ತು ಸೀರಿಯಲ್ ಎರಡನ್ನೂ ಜೊತೆ ಜೊತೆಗೆ ತೂಗಿಸಿಕೊಂಡು ಹೋಗುತ್ತಿದ್ದ ಚಂದು, ಅವಕಾಶ ಸಿಕ್ಕರೆ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಾರೆ. ಏಕೆಂದರೆ ಕಿರುತೆರೆ ಪ್ರಯಾಣದ ಪ್ರತಿಯೊಂದು ನಿಮಿಷವೂ ಬಹಳ ಬ್ಯೂಟಿಫುಲ್ ಆಗಿದ್ದು ಎಲ್ಲಾ ಕ್ಷಣಗಳನ್ನು ನಾನು ಸಖತ್ ಎಂಜಾಯ್ ಮಾಡಿದೆ ಎಂದು ಸಂತಸದಿಂದ ಹೇಳುತ್ತಾರೆ ಚಂದು ಗೌಡ.
'ಗೃಹ ಲಕ್ಷ್ಮಿ' ಧಾರಾವಾಹಿಯ ರಾಘವ್ ಆಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆ ಇತ್ತು. ತೆರೆಯ ಮೇಲೆ ನಟನಾಗಿ ಮಿಂಚಬೇಕು ಎಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾಗ ಗೃಹ ಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ದೊರೆಯಿತು. ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕೂಡಾ ನಟಿಸಿ ಸೈ ಎನಿಸಿಕೊಂಡ ಚಂದು ಇಂಜಿನಿಯರಿಂಗ್ ಪದವೀಧರ. ಸಿನಿಮಾದಲ್ಲಿ ನಟಿಸುವುದು ತನ್ನ ಜೀವನದ ಬಹುದೊಡ್ಡ ಕನಸು ಎಂದು ಹೇಳಿಕೊಳ್ಳುವ ಚಂದು ಈಗಾಗಲೇ ಬೆಳ್ಳಿತೆರೆಯಲ್ಲಿ ಮಿಂಚುವ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ. ಯಶಸ್ಸು ಆಸೆಯ ಕನಸಲ್ಲ, ಪ್ರಾಮಾಣಿಕ ಪ್ರಯತ್ನದ ಫಲ ಎಂಬ ಮಾತನ್ನು ನನಸಾಗಿಸಿರುವ ಚಂದು ಅವರು ನಟನ ಲೋಕದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಯಶಸ್ಸು ಕಂಡಿದ್ದಾರೆ. ಕಲೆ ಕೇವಲ ಒಂದು ದಿನದಲ್ಲಿ ಕಲಿತು ಮುಗಿಸಲು ಆಗುವುದಿಲ್ಲ. ಬದಲಿಗೆ ಪ್ರತಿದಿನ ಕಲಿಯಬೇಕಾಗುತ್ತದೆ. ನಟನೆ ಅದೆಷ್ಟು ನ್ಯಾಚುರಲ್ ಆಗಿರುತ್ತದೋ ಅಷ್ಟು ಬೇಗ ಜನ ಅದನ್ನು ಸ್ವೀಕರಿಸುತ್ತಾರೆ ಎಂದು ಹೇಳುವ ಚಂದು ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.