ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಮೆಗಾ ಧಾರಾವಾಹಿ 'ಲಕ್ಷ್ಮಿ ಬಾರಮ್ಮ' ಇಂದು ಕೊನೆಗೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ , ಚಿನ್ನು, ಲಚ್ಚಿ ಆಗಿ ಬಹಳಷ್ಟು ಕಿರುತೆರೆಪ್ರಿಯರ ಮನ ಸೆಳೆದಿರುವ ಸುಂದರಿ ಹೆಸರು ರಶ್ಮಿ ಪ್ರಭಾಕರ್.
ಧಾರಾವಾಹಿ ಇಂದು ಕೊನೆಯಾಗುತ್ತಿದ್ದು ತನ್ನ ಪಾತ್ರದ ಬಗ್ಗೆ ರಶ್ಮಿ ಮಾತನಾಡಿದ್ದಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಅನುಭವ ಬಹಳ ಸುಂದರವಾಗಿತ್ತು. ಈ ಧಾರಾವಾಹಿ ನನಗೆ ನಟನೆಯನ್ನು ಕಲಿಸಿದೆ. ಜನರ ಪ್ರೀತಿಯನ್ನು ನೀಡಿದೆ. ಒಂದರ್ಥದಲ್ಲಿ ಹೇಳಬೇಕೆಂದರೆ ನಾನು ನಾಯಕಿಯಾಗಿ ನಟಿಸಿದ ಮೊದಲ ಧಾರಾವಾಹಿ ಇದು. 2 ವರ್ಷಗಳ ಆ್ಯಕ್ಟಿಂಗ್ ಅನುಭವ ಇದ್ದರೂ ಏನೂ ಗೊತ್ತಿರಲಿಲ್ಲ. ಲಚ್ಚಿ ಆದ ಮೇಲೆ ನನಗೆ ಇದೀಗ ಸಾಕಷ್ಟು ಆಫರ್ಗಳು ಬರುತ್ತಿವೆ. ಬೇರೆ ಭಾಷೆಗಳ ಧಾರಾವಾಹಿಯಲ್ಲಿ ಕೂಡಾ ಅವಕಾಶ ದೊರೆಯುತ್ತಿದೆ. ನನಗೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕೆ ಜೈಮಾತಾ ಕಂಬೈನ್ಸ್ಗೆ ಚಿರಋಣಿ. ಇಡೀ ತಂಡವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಶ್ಮಿ.
ರಶ್ಮಿ ಪ್ರಭಾಕರ್ 'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸುವ ಮೂಲಕ ಬಣ್ಣದ ಯಾನ ಆರಂಭಿಸಿದರು. ನಂತರ ಮಹಾಭಾರತ, ಜೀವನ ಚೈತ್ರ ಧಾರಾವಾಹಿಗಳಲ್ಲಿ ನಟಿಸಿದ ರಶ್ಮಿ ಅವರನ್ನು ಜನರು ಗುರುತಿಸಿದ್ದು ಲಚ್ಚಿಯಾಗಿ. ಈ ಮುನ್ನ ಧಾರಾವಾಹಿಯಲ್ಲಿ ಲಚ್ಚಿಯಾಗಿ ನಟಿಸುತ್ತಿದ್ದ ಕವಿತಾ ಗೌಡ ಧಾರಾವಾಹಿಯಿಂದ ಹೊರ ಹೋದಾಗ ಆಯ್ಕೆ ಆದದ್ದು ಇದೇ ರಶ್ಮಿ. ಲಚ್ಚಿಯಾಗಿ ನಟಿಸುವ ಅವಕಾಶ ಬಂದಾಗ ಬೆಟ್ಟದಷ್ಟು ಸಂತೋಷವಾದರೂ ಮನದಾಳದಲ್ಲಿ ಸಣ್ಣ ಆತಂಕವಿತ್ತು. ಈಗಾಗಲೇ ಹೆಸರು ಗಳಿಸಿರುವ ಪಾತ್ರ ಅದು. ಜನ ಹಳೆಯ ಲಚ್ಚಿಯನ್ನು ಸ್ವೀಕರಿಸಿದ್ದಾರೆ. ಇದೀಗ ತಾನು ಲಚ್ಚಿಯಾಗಿ ಬಂದರೆ ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಅಳುಕು ನನಗೆ ಇತ್ತು ಎನ್ನುತ್ತಾರೆ ರಶ್ಮಿ. ಸದ್ಯಕ್ಕೆ ತೆಲುಗಿನ 'ಪೌರ್ಣಮಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ರಶ್ಮಿ ನಟಿಸುತ್ತಿದ್ದಾರೆ.