ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕ ಶಶಾಂಕ್ ಆಗಿ ಅಭಿನಯಿಸುತ್ತಿರುವ ಸೂರಜ್ ಹೂಗಾರ್ ಬೆಳಗಾವಿಯ ಹುಡುಗ. ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕ ಆಗಿ ಮೋಡಿ ಮಾಡುತ್ತಿರುವ ಸೂರಜ್ಗೆ ಕಲೆ ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು.
ಹೌದು, ಕಲಾರಾಧಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಸೂರಜ್ಗೆ ನಟನೆಯು ರಕ್ತಗತವಾಗಿಯೇ ಬಂದಿದೆ. ಸೂರಜ್ ಅಜ್ಜ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಅಜ್ಜನ ಹೊರತಾಗಿ ಕುಟುಂಬದ ಅನೇಕರು ಕಲೆಯ ಪ್ರಾಕಾರಗಳಾದ ಸಂಗೀತ, ನೃತ್ಯದಲ್ಲಿ ಪರಿಣಿತಿ ಪಡೆದಿದ್ದರು.
ಸೂರಜ್ಗೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಮೋಹ. ಅದಕ್ಕಾಗಿ ತರಬೇತಿಯನ್ನು ಕೂಡಾ ಪಡೆಯುತ್ತಿದ್ದರು. ಮುಂದೆ ಇಂಜಿನಿಯರಿಂಗ್ ಪದವಿ ಪಡೆದ ಸೂರಜ್ಗೆ ಕ್ರಮೇಣವಾಗಿ ಬಣ್ಣದ ಲೋಕದತ್ತ ವಿಶೇಷ ಆಸಕ್ತಿ ಮೂಡಿತು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿದ ಕೂಡಲೇ ಮುಂಬೈಗೆ ತೆರಳಿ ನಟನೆಗೆ ಬೇಕಾದಂತಹ ತರಬೇತಿಗಳನ್ನು ಪಡೆದರು.
ತರಬೇತಿ ಮುಗಿದದ್ದೇ ತಡ ಮಹಾನಗರಿಗೆ ಮರಳಿದ ಸೂರಜ್ ಮೊದಲು ಮಾಡಿದ ಕೆಲಸ ಇದ್ದ ಆಡಿಶನ್ಗಳಿಗೆಲ್ಲಾ ಭಾಗಿಯಾದದ್ದು. ಇದರ ನಡುವೆ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ಬೆಳಗಾವಿಯ ಹೈದ ಒಂದಷ್ಟು ಜಾಹೀರಾತುಗಳಿಗೂ ರೂಪದರ್ಶಿಯಾಗಿ ಮಿಂಚಿದರು.
ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಶಾರ್ಪ್ ಶೂಟರ್ ರಾಣಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸೂರಜ್ ಮೊದಲ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಎರಡನೇ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ಶಶಾಂಕ್ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿರುವ ಸೂರಜ್ಗೆ ನಟಿಸುವುದು ತುಂಬಾನೇ ಮುಖ್ಯ. ಕಿರುತೆರೆಯಾಗಲಿ, ಬೆಳ್ಳಿತೆರೆಯಾಗಲಿ, ನಾಯಕ ಅಥವಾ ವಿಲನ್ ಪಾತ್ರ ಯಾವುದೇ ಆಗಿರಲಿ ಒಟ್ಟಿನಲ್ಲಿ ನಟಿಸಬೇಕಾದುದು ಅತೀ ಮುಖ್ಯ. ಎಲ್ಲದಕ್ಕಿಂತಲೂ ಮುಖ್ಯವಾಗಿ ದೊರೆತಿರುವಂತಹ ಪಾತ್ರಕ್ಕೆ ಜೀವ ತುಂಬಬೇಕಾಗಿರುವುದು ಕಲಾವಿದನ ಆದ್ಯ ಕರ್ತವ್ಯ ಎಂಬುದು ಸೂರಜ್ ಅಂಬೋಣ.