ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ಸಿನಿಮಾ 'ಕುರುಕ್ಷೇತ್ರ'. ಸಿನಿಮಾ ಸೆಟ್ಟೇರಿದಾಗಿನಿಂದ ಬಿಡುಗಡೆಯಾಗುವವರೆಗೂ ತನ್ನದೇ ಹವಾ ಸೃಷ್ಟಿಸಿತ್ತು. ನಾಗಣ್ಣ ನಿರ್ದೇಶನದ ಈ ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿದ್ದಾರೆ.
ಇನ್ನು ಈ ಸಿನಿಮಾವನ್ನು ಇನ್ನೂ ನೋಡಿಲ್ಲ ಎಂಬುವವರಿಗೆ ಸಿಹಿಸುದ್ದಿ. ನೀವು ಮನೆಯಲ್ಲೇ ಕುಳಿತು ಆರಾಮವಾಗಿ ಈ ಸಿನಿಮಾ ವೀಕ್ಷಿಸಬಹುದು. ನಾಗಣ್ಣ ಅವರ ಅತ್ಯದ್ಭುತ ದೃಶ್ಯಕಾವ್ಯ ’ಕುರುಕ್ಷೇತ್ರ’ ಸಿನಿಮಾ ಸುಂದರವಾಗಿ ಮೂಡಿಬಂದಿದೆ. ದುರ್ಯೋಧನನ ದೃಷ್ಟಿಕೋನದ ಮೂಲಕ ಮಹಾಭಾರತದ ಮೌಲ್ಯಗಳನ್ನು ನಿರೂಪಿಸಲಾಗಿದೆ. ಕನ್ನಡದ ಈ 3ಡಿ ಐತಿಹಾಸಿಕ ಚಲನಚಿತ್ರದಲ್ಲಿ ದುರ್ಯೋಧನನ ಮತ್ತೊಂದು ಭಾಗವನ್ನು ತೆರೆದಿಟ್ಟಿದ್ದು, ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಸಿನಿಮಾ ಎಂಬ ಹೆಸರಿಗೆ ಪಾತ್ರವಾಗಿದೆ.
ದುರ್ಯೋಧನನಾಗಿ ದರ್ಶನ್ ಅಭಿನಯ ಕಣ್ಣಿಗೆ ಕಟ್ಟುವಂತಿದ್ದು ವೈಭವೋಪೇತವಾಗಿ ಮೂಡಿಬಂದಿದೆ. ಈ ಬಹುತಾರಾಗಣದ ಚಿತ್ರದಲ್ಲಿ ದ್ರೌಪದಿಯಾಗಿ ಸ್ನೇಹ, ಅರ್ಜುನನಾಗಿ ಸೋನು ಸೂದ್, ಭೀಷ್ಮನಾಗಿ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಮನಾಗಿ ದಾನಿಶ್ ಅಖ್ತರ್, ಶ್ರೀಕೃಷ್ಣನಾಗಿ ವಿ. ರವಿಚಂದ್ರನ್, ಮೇಘನಾರಾಜ್, ಹರಿಪ್ರಿಯರಂತಹ ಅದ್ಭುತ ನಟನಟಿಯರಿದ್ದು, ಪ್ರತಿಯೊಬ್ಬರ ಪಾತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಎನ್ನಬಹುದು. ಡಿಸೆಂಬರ್ 15 ಭಾನುವಾರ ಸಂಜೆ 6.30ಕ್ಕೆ ಈ ಸಿನಿಮಾ ಜೀ ಕನ್ನಡ ಹಾಗೂ ಜೀಕನ್ನಡ ಹೆಚ್ಡಿಯಲ್ಲಿ ಪ್ರಸಾರವಾಗಲಿದೆ.