ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ವಾಹಿನಿಗಳ ಪೈಕಿ ಉದಯ ವಾಹಿನಿಯೂ ಒಂದು. ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿ ಇದೀಗ ಯಶಸ್ವಿ 100 ಸಂಚಿಕೆಗಳನ್ನು ಪೂರೈಸಿದೆ.
ಲಾಕ್ಡೌನ್ ಬಳಿಕ ಪ್ರಾರಂಭವಾದ ಈ ಧಾರಾವಾಹಿಯು ಧಾರಾವಾಹಿಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯ ಹೆಸರೇ ಹೇಳುವಂತೆ 'ಕಾವ್ಯಾಂಜಲಿ 'ಯು ಕಾವ್ಯ ಹಾಗೂ ಅಂಜಲಿ ಎಂಬ ಅಕ್ಕತಂಗಿಯರ ನಡುವಿನ ಕಥೆ. ಕಾವ್ಯ ಹಾಗೂ ಅಂಜಲಿ ಅಕ್ಕ ತಂಗಿಯರಿಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ಸ್ ರೀತಿ ಇರುತ್ತಾರೆ. ಆದರೆ ಮುಂದೆ ನಡೆಯುವ ಅನಿರೀಕ್ಷಿತ ಘಟನೆಗಳಿಂದಾಗಿ ಮುಂದೆ ಅವರಿಬ್ಬರೂ ಒಂದೇ ಮನೆಗೆ ಮದುವೆಯಾಗಿ ಹೋಗುತ್ತಾರೆ.
ತಾನು ಇಷ್ಟಪಟ್ಟ ಸುಶಾಂತ್, ಅಂಜಲಿಯನ್ನು ಇಷ್ಟಪಟ್ಟ ಕಾರಣಕ್ಕೆ ಆಕೆಯನ್ನು ಒಂದು ಮಾತು ಕೇಳದೆ ಸುಶಾಂತ್ ಜೊತೆಗೆ ಮದುವೆ ಮಾಡಿಸುತ್ತಾಳೆ ಕಾವ್ಯ. ಇತ್ತ ಕಾವ್ಯ ಬಾಳು ಹಾಳಾಯಿತು ಎಂದು ಅವಳ ಅಮ್ಮ ಅಳುವಾಗ ಸುಶಾಂತ್ ತಾಯಿ ವೇದಾ ತಮ್ಮ ಮತ್ತೊಬ್ಬ ಮಗ ಸಿದ್ಧಾರ್ಥ್ ಜೊತೆ ಕಾವ್ಯ ಮದುವೆ ಮಾಡಿಸುತ್ತಾರೆ. ಆದರೆ ಕಾವ್ಯಾಗೆ ಸಿದ್ಧಾರ್ಥ್ ಇಷ್ಟವಿಲ್ಲ, ಅಂಜಲಿಗೆ ಸುಶಾಂತ್ ಇಷ್ಟವಿಲ್ಲ. ಬಲವಂತದಿಂದ ಹಾಗೂ ಒತ್ತಾಯದಿಂದ ಕಾವ್ಯ ಹಾಗೂ ಅಂಜಲಿ ಮದುವೆಯಾಗಿದ್ದಾರೆ. ಈ ಎರಡೂ ಜೋಡಿಗಳ ನಡುವೆ ಪ್ರೀತಿ ಹುಟ್ಟುವುದಾ...? ಎರಡೂ ಜೋಡಿಗಳು ಸುಖದಿಂದ ಸಂಸಾರ ಮಾಡುತ್ತಾರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ. ಕಾವ್ಯ ಆಗಿ ವಿದ್ಯಾಶ್ರೀ ಜಯರಾಂ, ಅಂಜಲಿಯಾಗಿ ಸುಷ್ಮಿತಾ ಭಟ್, ಸುಶಾಂತ್ ಆಗಿ ಪವನ್ ರವೀಂದ್ರ ಹಾಗೂ ಸಿದ್ಧಾರ್ಥ್ ಆಗಿ ದರ್ಶಕ್ ಗೌಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಿಥುನ್ ತೇಜಸ್ವಿ , ರವಿ ಭಟ್ , ಅಭಿನಯ, ಮರೀನಾ ತಾರಾ ಮುಂತಾದ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.