ಹಳೆ ಸಂಪ್ರದಾಯ ಹಾಗೂ ಆಧುನಿಕ ವಿಚಾರಧಾರೆಯ ನಡುವೆ ಕಥೆ ಹೆಣೆದಿರುವ 'ಕಸ್ತೂರಿ ನಿವಾಸ' ಧಾರಾವಾಹಿ ಯಶಸ್ವಿ 250 ಸಂಚಿಕೆಗಳನ್ನು ಪೂರೈಸಿದೆ. ಉದಯ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.
ನಮ್ಮ ಹಿರಿಯರು ಕುಟುಂಬದ ಒಳಿತಿಗಾಗಿ ಹೇಗೆ ಪ್ರಾರ್ಥಿಸುತ್ತಿದ್ದರು ಹಾಗೂ ಈಗಿನವರು ಹೇಗಿರುತ್ತಾರೆ ಎಂಬುದರ ಬಗ್ಗೆ ಧಾರಾವಾಹಿಯಲ್ಲಿ ಹೇಳುವ ಮೂಲಕ ಇಂದಿನ ಪೀಳಿಗೆಗೆ ಸಂದೇಶ ಕೂಡಾ ನೀಡಲಾಗಿದೆ. ಸದ್ಯ ಕಥೆಯಲ್ಲಿ ನಾಯಕಿ ಮೃದುಲಾ, ಕಳೆದುಹೋಗಿರುವ ತನ್ನ ತಾಯಿಯನ್ನು ಹುಡುಕಾಡಲು ತಯಾರಿ ನಡೆಸುತ್ತಿದ್ದಾಳೆ. ಮೃದುಲಾ ಗಂಡ ರಾಘವ ಕೂಡಾ ಅವಳ ಹುಡುಕಾಟಕ್ಕೆ ಬೆಂಬಲಿಸಿ ಅತ್ತೆಯನ್ನು ಹುಡುಕಲು ನೆರವಾಗುತ್ತಾನೆ. ಮತ್ತೊಂದೆಡೆ ರಾಘವನ ತಾಯಿ ಮೃದುಳಾಳನ್ನು ಸೊಸೆಯಾಗಿ ಒಪ್ಪಿಕೊಂಡಿರಲಿಲ್ಲ.
ಆದರೆ ಮನೆ ವಾತಾವರಣ ಈಗ ತಿಳಿಯಾಗಿದ್ದು ರಾಘವ ತಾಯಿ ಮೃದುಳಾಳನ್ನು ಸೊಸೆಯಾಗಿ ಒಪ್ಪಿಕೊಂಡಿದ್ದಾರೆ. ಮೃದುಲಾಳ ಅಮ್ಮ ದೊರೆಯುತ್ತಾರಾ..? ಮೃದುಲಾ ತಾಯಿಗೂ ಕಸ್ತೂರಿ ನಿವಾಸಕ್ಕೂ ಏನು ಸಂಬಂಧ..? ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ 'ಕಸ್ತೂರಿ ನಿವಾಸ'ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ನಾಯಕಿ ನಾಯಕರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಅಜಯ್ ರಾವ್ ಸೇತುವೆಯಾಗಿದ್ದು ತಾಯಿಯ ಬಗ್ಗೆ ಮೃದುಲಾಳಿಗಿರುವ ಭಾವನೆಯನ್ನು ರಾಘವನಿಗೆ ಅರ್ಥ ಮಾಡಿಸಿದ್ದರು.
'ಕಸ್ತೂರಿ ನಿವಾಸ'ದಲ್ಲಿ ದಿಲೀಪ್ ಶೆಟ್ಟಿ ರಾಘವನಾಗಿ ನಟಿಸಿದ್ದು , ಅಮೃತ ರಾಮಮೂರ್ತಿ ಮೃದುಲ ಪಾತ್ರ ಮಾಡುತ್ತಿದ್ದಾರೆ. ಇತ್ತೀಚಿಗೆ ಜ್ಯೋತಿ ರೈ ಈ ತಂಡ ಸೇರಿಕೊಂಡಿದ್ದು ನಾಯಕಿಯ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಜೈ ಜಗದೀಶ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.