ಇತ್ತೀಚಿನ ದಿನಗಳಲ್ಲಿ ಕನ್ನಡದ ಅನೇಕ ಧಾರಾವಾಹಿಗಳು ಪರಭಾಷೆಗೆ ರಿಮೇಕ್ ಆಗುತ್ತಿವೆ. ಕನ್ನಡದ ಜನಪ್ರಿಯ ಧಾರಾವಾಹಿ'ಅಗ್ನಿಸಾಕ್ಷಿ' ಮತ್ತು 'ಮಿಥುನ ರಾಶಿ' ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದ್ದು, ಇದೀಗ ಅವುಗಳ ಸಾಲಿಗೆ 'ಸುಂದರಿ' ಸಹ ಸೇರಿಕೊಂಡಿದೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಗಿ 'ಸುಂದರಿ' ಬೆಂಗಾಲಿ ಭಾಷೆಗೆ ರಿಮೇಕ್ ಆಗಲಿದೆ. ಅಂದಹಾಗೇ 'ಸುಂದರಿ' ಧಾರಾವಾಹಿಯು ಈಗಾಗಲೇ ತಮಿಳು ಭಾಷೆಗೆ ರಿಮೇಕ್ ಆಗಿದ್ದು, ಇದೀಗ ಬೆಂಗಾಲಿ ವೀಕ್ಷಕರಿಗೂ ಮನರಂಜನೆ ನೀಡಲು ಇದೇ ಜುಲೈ 19 ರಿಂದ ಸುಂದರಿ ತಯಾರಾಗಿದ್ದಾಳೆ.
'ಸ್ಲಿಂಗ್ ಶಾಟ್' ನಿರ್ಮಾಣ ಸಂಸ್ಥೆಯಡಿ ನಟ, ನಿರೂಪಕ ಹಾಗೂ ನಿರ್ದೇಶಕರಾಗಿರುವ ರಮೇಶ್ ಅರವಿಂದ್ ಅವರ ನೇತೃತ್ವದಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ಹೊಸ ಕಲ್ಪನೆಯ ಜಗತ್ತಿನಲ್ಲಿ ವರ್ಣಭೇದದ ವಿರುದ್ಧ ನಿಂತು ತನ್ನ ಕನಸಿನ ಹಾದಿಯನ್ನು ಹಿಂಬಾಲಿಸುವ ನಾಯಕಿ ಸುಂದರಿ ಎಂಬ ಹುಡುಗಿಯ ಕರಾಳ ಕಾಲ್ಪನಿಕ ಕಥೆಯನ್ನು 'ಸುಂದರಿ' ಧಾರಾವಾಹಿ ಹೊಂದಿದೆ. ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣ ಮುಖ್ಯ ಎಂದು 'ಸುಂದರಿ'ಯ ಕಥೆ ಸಾರುತ್ತದೆ.