ಕಲಾವಿದರಿಗೆ ಭಾಷೆಯ ಹಂಗಿಲ್ಲ ಎಂಬುದು ತಿಳಿದ ವಿಚಾರ. ಇತರ ರಾಜ್ಯಗಳಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ, ಕಿರುತೆರೆಗೆ ಬಂದು ಹೆಸರು ಮಾಡಿದ ಎಷ್ಟೋ ನಟರಿದ್ದಾರೆ. ಅದೇ ರೀತಿ ಕನ್ನಡದ ಎಷ್ಟೋ ನಟ-ನಟಿಯರು ಬೇರೆ ಭಾಷೆಗೆ ಹೋಗಿ ಹೆಸರು ಮಾಡಿದ್ದಾರೆ. ಕನ್ನಡ ಧಾರಾವಾಹಿಗಳ ಮೂಲಕ ಕರಿಯರ್ ಆರಂಭಿಸಿ ಪರಭಾಷೆ ಧಾರಾವಾಹಿಗಳಲ್ಲಿ ಕೂಡಾ ಹೆಸರು ಮಾಡಿರುವ ಎಷ್ಟೋ ನಟ-ನಟಿಯರು ಇದ್ದಾರೆ.
ಜಯರಾಮ್ ಕಾರ್ತಿಕ್
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಜಯರಾಮ್ ಕಾರ್ತಿಕ್ ಹಿಂದಿಯ 'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ರಾವಣನಾಗಿ ಅಭಿನಯಿಸಿದ್ದಾರೆ. ಜೊತೆಗೆ ಅವರು ಹಿಂದಿ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ.
ಕಿರಣ್ ರಾಜ್
'ಕಿನ್ನರಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿರುವ ಕಿರಣ್ ರಾಜ್ ಸದ್ಯ 'ಕನ್ನಡತಿ' ಧಾರಾವಾಹಿಯ ಹರ್ಷ ಆಗಿ ನಟಿಸುತ್ತಿದ್ದಾರೆ. ಹಿಂದಿಯ 'ತೂ ಆಶಿಕಿ' ಎಂಬ ಸೀರಿಯಲ್ನಲ್ಲಿ ಮಾಂಟಿ ಶೆಟ್ಟಿ ಎಂಬ ಪಾತ್ರ ಮಾಡುವ ಮೂಲಕ ಪರಭಾಷೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಕಿರಣ್ ರಾಜ್.
ನೇಹಾ ಗೌಡ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕಿ ಗೊಂಬೆ ಆಲಿಯಾಸ್ ಶ್ರುತಿ ಆಗಿ ಅಭಿನಯಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ನೇಹಾ ಗೌಡ ಕೂಡಾ ತಮಿಳಿನ 'ಕಲ್ಯಾಣ ಪರಿಸು' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ತಮಿಳಿನ 'ರೋಜಾ' ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದರು.
ರಶ್ಮಿ ಪ್ರಭಾಕರ್
ಜೀವನ ಚೈತ್ರ, ಶುಭ ವಿವಾಹ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ರಶ್ಮಿ ಪ್ರಭಾಕರ್ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಅಲಿಯಾಸ್ ಲಕ್ಷ್ಮಿ ಪಾತ್ರದ ಮೂಲಕ ಜನಪ್ರಿಯತೆ ಪಡೆದವರು. ಇದೀಗ ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡುವ ಮೂಲಕ ಅಲ್ಲಿ ಕೂಡಾ ಕಮಾಲ್ ಮಾಡುತ್ತಿದ್ದಾರೆ ರಶ್ಮಿ.
ಭೂಮಿ ಶೆಟ್ಟಿ
'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಬಂದ ಚೆಲುವೆ ಭೂಮಿ ಶೆಟ್ಟಿ ಕೂಡಾ ಪರಭಾಷೆಯಲ್ಲಿ ಮಿಂಚಿದ್ದಾರೆ. ತೆಲುಗಿನ 'ನಿನ್ನೇ ಪೆಳ್ಳಾಡತ' ಧಾರಾವಾಹಿಯಲ್ಲಿ ಭೂಮಿ ನಟಿಸಿದ್ದಾರೆ.
ಚಂದನ್ ಕುಮಾರ್
ರಾಧಾ ಕಲ್ಯಾಣ, ಲಕ್ಷ್ಮಿ ಬಾರಮ್ಮ, ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಚಂದನ್ ಕುಮಾರ್ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ತೆಲುಗು ಕಿರುತೆರೆಗೆ ಪ್ರವೇಶಿಸಿದರು. ಈಗ ಚಂದನ್ಗೆ ತೆಲುಗು ಕಿರುತೆರೆಯಲ್ಲಿ ಕೂಡಾ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಚಂದು ಗೌಡ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸಿದ್ದ ಚಂದು ಗೌಡ ಕೂಡಾ ಪರಭಾಷೆಯಲ್ಲಿ ಕಮಾಲ್ ಮಾಡಿದ್ದಾರೆ. ತೆಲುಗಿನ ಹೊಸ ಧಾರಾವಾಹಿ 'ತ್ರಿನಯನಿ'ಯಲ್ಲಿ ನಾಯಕರಾಗಿ ಚಂದು ಕಾಣಿಸಿಕೊಳ್ಳುತ್ತಿದ್ದಾರೆ.
ಸುಪ್ರಿತಾ ಸತ್ಯನಾರಾಯಣ್
ಸೀತಾ ವಲ್ಲಭದ ಗುಬ್ಬಿ ಆಲಿಯಾಸ್ ಮೈಥಿಲಿ ಆಗಿ ಅಭಿನಯಿಸುತ್ತಿರುವ ಸುಪ್ರೀತಾ ಕೂಡಾ ತೆಲುಗಿನ ಸಾವಿತ್ರಮ್ಮ ಗಾರಿ ಅಬ್ಬಾಯಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಯೆಷಾ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಸುಪ್ರೀತಾ ಮಾಡುತ್ತಿದ್ದಾರೆ.