ಜ್ಯೋತಿ ರೈ, ಕಿರುತೆರೆ ವೀಕ್ಷಕರಿಗೆ ಬಹಳ ಪರಿಚಿತ ಮುಖ. ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಜೋಗುಳ' ಧಾರಾವಾಹಿಯಲ್ಲಿ ಮಗುವಿಗೆ ಹಂಬಲಿಸುವ ತಾಯಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಜ್ಯೋತಿ ರೈ, ತಮ್ಮ ಸಹಜ ಅಭಿನಯಕ್ಕೆ ಹೆಸರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಮೂರು ಗಂಟು' ಧಾರಾವಾಹಿಯಲ್ಲಿ ಮಾಧವಿ ಆಗಿ ಜ್ಯೋತಿ ಮೋಡಿ ಮಾಡಿದ್ದರು. ಈ ಧಾರಾವಾಹಿ ಇತ್ತೀಚೆಗೆ ಮುಕ್ತಾಯಗೊಂಡಿತ್ತು.
'ಮೂರುಗಂಟು' ಧಾರಾವಾಹಿಯಲ್ಲಿ ಜವಾಬ್ದಾರಿಯುತ ಅಕ್ಕನಾಗಿ ಕಾಣಿಸಿಕೊಂಡಿದ್ದ ಜ್ಯೋತಿ ರೈ, ಮೊದಲ ಬಾರಿಗೆ ನೆಗೆಟಿವ್ ರೋಲ್ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಜ್ಯೋತಿ ನಟಿಸಿದ್ದ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಪಾಸಿಟಿವ್ ಪಾತ್ರಗಳಲ್ಲೇ ಕಾಣಿಸಿಕೊಂಡಿರುವ ಜ್ಯೋತಿ ನೆಗೆಟಿವ್ ಪಾತ್ರವನ್ನು ಕಿರುತೆರೆಪ್ರಿಯರು ಮೆಚ್ಚಿಕೊಂಡಿದ್ದರು. ಜ್ಯೋತಿ ರೈ ಇದೀಗ ಪಾರ್ವತಿ ಆಗಿ ನಿಮ್ಮ ಮುಂದೆ ಬರಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನವೀನ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಭಕ್ತಿ ಪ್ರಧಾನ ಧಾರಾವಾಹಿ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿಯಲ್ಲಿ ಪಾರ್ವತಿ ಆಗಿ ಜ್ಯೋತಿ ರೈ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರಕ್ಕೆ ಇವರು ಜೀವ ತುಂಬಲಿದ್ದು ತಮ್ಮ ನೆಚ್ಚಿನ ನಟಿಯನ್ನು ಪಾರ್ವತಿ ಅವತಾರದಲ್ಲಿ ಕಣ್ತುಂಬಿಸಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದರೊಂದಿಗೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ತಾಯಿ ಪಾತ್ರದಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ.