ಡಬ್ಬಿಂಗ್ ಸಿನಿಮಾಗಳು ಕನ್ನಡಕ್ಕೆ ಹೊಸತೇನಲ್ಲ. ವಾರಾಂತ್ಯದಲ್ಲಿ ಹೊಸ ಡಬ್ಬಿಂಗ್ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ರಾರಾಜಿಸುತ್ತಿವೆ. ವಾರ ಪೂರ್ತಿ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾದರೆ ವಾರಾಂತ್ಯದಲ್ಲಿ ಡಬ್ಬಿಂಗ್ ಸಿನಿಮಾಗಳು ಪ್ರಸಾರವಾಗುತ್ತಿವೆ.
ಈ ವಾರ ಕೂಡಾ ಹೊಸ ಡಬ್ಬಿಂಗ್ ಸಿನಿಮಾವೊಂದು ಪ್ರಸಾರವಾಗುತ್ತಿದೆ. ತೆಲುಗಿನಲ್ಲಿ ಹಿಟ್ ಆದ 'ಅರವಿಂದ ಸಮೇತ ವೀರರಾಘವ' ಈಗ ಕನ್ನಡಕ್ಕೆ ಡಬ್ ಆಗಿ ಇದೇ ಭಾನುವಾರ ಸಂಜೆ 6 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಳ್ಳಿಯ ಮುಖ್ಯಸ್ಥನ ಬಳಿ ನಾಯಕ ವೀರ ರಾಘವರೆಡ್ಡಿ ಯಾವುದೋ ವಿಚಾರಕ್ಕೆ ಹೋರಾಟ ಮಾಡುತ್ತಾನೆ. ಅಲ್ಲಿಂದ ಅವನಿಗೆ ಹಿಂಸೆ ಆರಂಭವಾಗುತ್ತದೆ.
ಹಿಂಸೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಅರಿತ ನಾಯಕ ಇದೆಲ್ಲದರಿಂದ ದೂರವಿರಲು ಬೇರೆ ಊರಿಗೆ ತೆರಳುತ್ತಾನೆ. ಅಲ್ಲಿಂದ ಅವನ ಬದುಕು ಕೂಡಾ ಬದಲಾಗುತ್ತದೆ. ಇದರ ಜೊತೆಗೆ ವರ್ಷಗಳಿಂದ ವೈಷಮ್ಯದಿಂದಿದ್ದ ಹಳ್ಳಿಗಳ ಮಧ್ಯೆ ಶಾಂತಿ ಕಾಪಾಡಲು ಯತ್ನಿಸುತ್ತಾನೆ. ಮತ್ತೆ ಅವನು ಊರಿಗೆ ಮರಳಿ ಬರುತ್ತಾನಾ..? ಹಳೆ ವೈಷಮ್ಯ ಮಾಯವಾಗುವುದಾ..? ಎಂದು ತಿಳಿಯಲು ನೀವು ಸಿನಿಮಾ ನೋಡಬೇಕು.
ಈ ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್ ನಾಯಕರಾಗಿ ನಟಿಸಿದ್ದರೆ, ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಉಳಿದಂತೆ ಜಗಪತಿ ಬಾಬು, ಸುನಿಲ್ ,ನವೀನ್ ಚಂದ್ರ , ಸುಪ್ರಿಯಾ ಪಾಠಕ್ ಮುಂತಾದವರು ತಾರಾಗಣದಲ್ಲಿದ್ದಾರೆ.