ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ವೀಕ್ಷಕರ ಮನಗೆದ್ದಿರುವ 'ಜೊತೆ ಜೊತೆಯಲಿ' ಧಾರಾವಾಹಿ ಆರಂಭದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಧಾರಾವಾಹಿಗಳ ಸಾಲಿನಲ್ಲಿ ಸದಾ ಕಾಲ ಮುಂಚೂಣಿಯಲ್ಲಿರುವ 'ಜೊತೆ ಜೊತೆಯಲಿ' ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ಎಲ್ಲರ ಗಮನ ಸೆಳೆಯುತ್ತಾ ಬಂದಿದೆ.
ಕಳೆದ ವಾರದಿಂದ ಈ ಕಥೆಗೆ ರೋಚಕ ತಿರುವು ಸಿಗುತ್ತಿದ್ದು, ವೀಕ್ಷಕರು ಎಲ್ಲೇ ಇದ್ದರೂ, ಎಷ್ಟೇ ಕೆಲಸ ಇದ್ದರೂ ತಪ್ಪದೆ ರಾತ್ರಿ 8.30ಕ್ಕೆ ಟಿವಿ ಮುಂದೆ ಹಾಜರಾಗುತ್ತಾರೆ. ಆರ್ಯವರ್ಧನ್ ಆಗಿ ಗಮನ ಸೆಳೆದಿರುವ ಅನಿರುದ್ಧ್ ಅವರನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಿಪ್ಪ ಅನಿರುದ್ಧ್ ಇದೀಗ ಬೆಂಗಳೂರಿನ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಶೂಟಿಂಗ್ ಬೆಂಗಳೂರು ಮೆಟ್ರೋದಲ್ಲಿ ನಡೆದಿದ್ದು, ಅದರಲ್ಲಿ ನಾಯಕ ಆರ್ಯವರ್ಧನ್ ಹಾಗೂ ನಾಯಕಿ ಅನು ಸಿರಿಮನೆ ಹಾಗೂ ಅವರ ಕುಟುಂಬ ಮೆಟ್ರೋದಲ್ಲಿ ಪ್ರಯಾಣಿಸುವ ದೃಶ್ಯವಿದೆ.
ಶೂಟಿಂಗ್ ಜೊತೆಗೆ ಮೆಟ್ರೋ ಪಯಣವನ್ನು ಅನಿರುದ್ಧ್ ಸಖತ್ ಎಂಜಾಯ್ ಮಾಡಿದ್ದು, ಇದು ಅವರ ಮೊದಲ ಮೆಟ್ರೋ ಪಯಣ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಮೆಟ್ರೋದಲ್ಲಿ ತಮ್ಮ ನೆಚ್ಚಿನ ನಟ ಅನಿರುದ್ಧ್ ಅವರನ್ನು ಕಂಡ ವೀಕ್ಷಕರು ಥ್ರಿಲ್ ಆಗಿದ್ದಾರೆ. ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದ ಅನಿರುದ್ಧ್ ಇದೀಗ ಕಣ್ಣ ಮುಂದೆ ಬಂದಿರುವುದು ಹಲವರಿಗೆ ಸಂತಸ ನೀಡಿದೆ. ಜೊತೆಗೆ ಅನಿರುದ್ಧ್ ಮತ್ತು ಅನು ಸಿರಿಮನೆ ಅವರನ್ನು ಸುತ್ತುವರೆದ ಅಭಿಮಾನಿಗಳು ಫೋಟೋ ತೆಗೆಸಿಕೊಂಡು ಸಂತೋಷಪಟ್ಟಿದ್ದಾರೆ.