ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಜೊತಜೊತೆಯಲಿ ತೆಲುಗು ಭಾಷೆಗೆ ರಿಮೇಕ್ ಆಗಿದ್ದು, 'ಪ್ರೇಮ ಎಂಥ ಮಧುರಂ' ಎಂಬ ಹೆಸರಿನಲ್ಲಿ ಪ್ರಸಾರ ಕಾಣುತ್ತಿದೆ.
ಅನು ಸಿರಿಮನೆ ಪಾತ್ರಕ್ಕೆ ಕನ್ನಡತಿ ವರ್ಷಾ ಕಾಂತರಾಜ್ ಜೀವ ತುಂಬಿದ್ದು, ಆ ಮೂಲಕ ಪರಭಾಷೆಯಲ್ಲಿ ಮಿಂಚುತ್ತಿದ್ದಾಳೆ. ಝೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮ ಎಂಥ ಮಧುರಂ'ನ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ವರ್ಷ ಓದಿದ್ದು, ಇಂಟಿರಿಯರ್ ಡಿಸೈನಿಂಗ್ನಲ್ಲಿ ಡಿಪ್ಲೋಮಾ. ಆದರೆ, ಬೆಳೆದದ್ದು ಕಿರುತೆರೆ ನಟನಾ ಲೋಕದಲ್ಲಿ.
ರಾಜ ರಾಣಿ ಧಾರಾವಾಹಿಯ ಆಡಿಶನ್ ನಲ್ಲಿ ಭಾಗವಹಿಸಿದ ವರ್ಷಾಗೆ ಅವಕಾಶ ದೊರೆಯುವುದು ಡೌಟು ಎಂಬ ನಿರ್ಧಾರ ಮಾಡಿದ್ದರು. ಆಗ ನೀವು ಧಾರಾವಾಹಿಗೆ ಆಯ್ಕೆ ಆಗಿದ್ದೀರಿ, ಬನ್ನಿ ಎಂಬ ಕರೆ ಬಂದಾಗ ಡೌಟು ಎಲ್ಲಾ ಹುಸಿಯಾಯಿತು. ಮಾತ್ರವಲ್ಲ ರಾಜ ರಾಣಿಯ 'ಪ್ರಿಯಾ' ಆಗಿ ನಟನಾ ಯಾನವನ್ನು ಆರಂಭಿಸಿದರು.
ಮುಂದೆ ಕಸ್ತೂರಿ ವಾಹಿನಿಯ ನಾಗಮಂಡಲ ಧಾರಾವಾಹಿಯಲ್ಲಿ ರಂಜಿನಿ ಪಾತ್ರದಲ್ಲಿ ನಟಿಸಿ, ವರ್ಷಾ ಎರಡನೇ ಧಾರಾವಾಹಿಯ ಮೂಲಕ ಕಿರುತೆರೆ ಲೋಕದಲ್ಲಿ ಶೈನ್ ಆದರು. ಮುಂದೆ ಆಕೆ ಬದಲಾಗಿದ್ದು ಮೃದುಲಳಾಗಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಅಭಿನಯಿಸುತ್ತಿದ್ದ ವರ್ಷ ಕಾಂತರಾಜ್, ಇದೀಗ ತೆಲುಗಿಗೆ ಹಾರಿದ್ದಾರೆ.
ಕಸ್ತೂರಿ ನಿವಾಸದ ಮೃದುಲಾ ಪಾತ್ರಕ್ಕೆ ಬಾಯ್ ಹೇಳಿರುವ ವರ್ಷ, ಇದೀಗ ಅನು ಆಗಿ ಮಿಂಚುತ್ತಿದ್ದಾರೆ. ಆ ಮೂಲಕ ಪರಭಾಷೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.