ಡಬ್ಬಿಂಗ್ ಧಾರಾವಾಹಿಗಳ ಅಬ್ಬರದಲ್ಲಿ ಎಷ್ಟೋ ಕನ್ನಡ ಧಾರಾವಾಹಿಗಳು ಇಂದಿಗೂ ತಮ್ಮ ಅಸ್ವಿತ್ವ ಉಳಿಸಿಕೊಂಡಿವೆ. ಈ ಧಾರಾವಾಹಿಗಳನ್ನು ವೀಕ್ಷಕರು ಅಷ್ಟು ಸುಲಭವಾಗಿ ಬಿಟ್ಟುಕೊಡುವವರಲ್ಲ. ಅಷ್ಟರ ಮಟ್ಟಿಗೆ ಈ ಧಾರಾವಾಹಿಗಳು ವೀಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿವೆ.
ಆಕೆಗೆ ಸದಾ ಮನೆಯವರ ಬಗ್ಗೆ ಕಾಳಜಿ, ಪ್ರತಿ ಕ್ಷಣವೂ ಕುಟುಂಬದವರ ಇಷ್ಟಕಷ್ಟ, ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಈಕೆ, ಏಕ ಕಾಲಕ್ಕೆ ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ಎಲ್ಲಾ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾಳೆ.
ತನ್ನ ಮನೆ, ಸಂಸಾರವೇ ಸರ್ವಸ್ವ ಎಂದು ಜೀವನ ಪೂರ್ತಿ ಬದುಕುವ ಆಕೆ ತನ್ನ ಗಂಡ ಮತ್ತು ಮಕ್ಕಳಿಂದ ಕೇವಲ ಪ್ರೀತಿ ತುಂಬಿದ ಮಾತು, ಒಂದಷ್ಟು ಪ್ರಶಂಸೆ ಬಿಟ್ಟರೆ ಹೆಚ್ಚೇನು ಬಯಸುವುದಿಲ್ಲ. ಆದರೆ ಇಲ್ಲಿ ಎಲ್ಲವೂ ಉಲ್ಟಾ. ಮನೆಗಾಗಿ ತನ್ನ ಜೀವನವನ್ನೇ ತೇಯ್ದಿರುವ ಆಕೆಯನ್ನು ಹೊಗಳುವುದಿರಲಿ, ಆಕೆಯ ಮಾತನ್ನೂ ಕೇಳಿಸಿಕೊಳ್ಳುವ ವ್ಯವಧಾನ ಕೂಡಾ ಮನೆಯವರಿಗೆ ಇರುವುದಿಲ್ಲ. ಸಾಮಾನ್ಯ ಗೃಹಿಣಿ ಎನ್ನುವ ಲೇಬಲ್‌ನೊಂದಿಗೆ ಬದುಕುತ್ತಿರುವ ಸಾವಿರಾರು ಮಹಿಳೆಯರ ನಡುವೆ ಆಕೆಯೂ ಒಬ್ಬಳು. ಆಕೆಯ ಹೆಸರು ಆಶಾ.
ನಾವು ಹೇಳುತ್ತಿರುವುದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇಂತಿ ನಿಮ್ಮ ಆಶಾ ಧಾರಾವಾಹಿ'ಯ ಬಗ್ಗೆ. ಮಧ್ಯ ವಯಸ್ಕ ಮಹಿಳೆ ಆಶಾ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ. ಆಕೆಗೆ ಮದುವೆಯಾಗಿ 20 ವರ್ಷಗಳೇ ಕಳೆದಿದೆ. ಎರಡು ಗಂಡು, ಒಂದು ಹೆಣ್ಣು ಮಗುವಿನ ತಾಯಿ ಆಶಾ. ಗಂಡನಿಗೆ ಆಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರೂ ಅತ್ತೆ ದೂಷಿಸುವುದು ಆಶಾಳನ್ನೇ.
ಕಳೆದುಹೋಗಿರುವ ಪ್ರಪಂಚದಲ್ಲಿ ಆಶಾ ಯಾವ ರೀತಿಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳುತ್ತಾಳೆ ಎಂಬುದೇ ಧಾರಾವಾಹಿಯ ಕಥಾ ಹಂದರ. ರವಿಕಿರಣ್ ನಿರ್ದೇಶನದ 'ಇಂತಿ ನಿಮ್ಮ ಆಶಾ' ಧಾರಾವಾಹಿ ಇದೀಗ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ. ಧಾರಾವಾಹಿಯಲ್ಲಿ ಆಶಾ ಆಗಿ ಸಂಗೀತ ಅನಿಲ್ ಅಭಿನಯಿಸಿದ್ದರೆ ಆಕೆಯ ಗಂಡ ಸಮರ್ಥ್ ಆಗಿ ಧರ್ಮ ನಟಿಸಿದ್ದಾರೆ.