ಕನ್ನಡ ಕಿರುತೆರೆಪ್ರಿಯರು ಡಬ್ಬಿಂಗ್ ಧಾರಾವಾಹಿಗಳನ್ನು ಸ್ವೀಕರಿಸಿದ್ದಾರೆ ಎನ್ನುದಕ್ಕೆ ಮಹಾಭಾರತ ಹಾಗೂ ರಾಧಾಕೃಷ್ಣ ಧಾರಾವಾಹಿಗಳು ಟಾಪ್ 1-2 ಸ್ಥಾನದಲ್ಲಿರುವುದೇ ಸಾಕ್ಷಿ. ಈ ಎರಡೂ ಧಾರಾವಾಹಿಗಳನ್ನಂತೂ ಜನರು ನೋಡದೆ ಇರುವುದಿಲ್ಲ.
ರಾಧೆ-ಕೃಷ್ಣರ ಪ್ರೀತಿ ಮುಂದಿನ ಶತಮಾನಗಳಿಗೂ ಮಾದರಿಯಾದುದು. ರಾಧೆಯ ಪ್ರೀತಿ , ಕೃಷ್ಣನ ತುಂಟಾಟ ಇವೆಲ್ಲಾ ಎಲ್ಲರ ಅಚ್ಚುಮೆಚ್ಚು. ಬಾಲ್ಯದ ಗೆಳತಿಯ ಬಗ್ಗೆ ಕೃಷ್ಣನ ಆ ಪ್ರೀತಿ ಇಂದಿಗೂ ಮರೆಯುವಂತದಲ್ಲ. ರಾಧಾಕೃಷ್ಣರ ಈ ಪ್ರೇಮ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಈ ಪೌರಾಣಿಕ ಧಾರಾವಾಹಿಯಲ್ಲಿ ರಾಧೆಯಾಗಿ ಗಮನ ಸೆಳೆದಿರುವ ಕಾಶ್ಮೀರಿ ಚೆಲುವೆಯ ಹೆಸರು ಮಲ್ಲಿಕಾ ಸಿಂಗ್. ಮಲ್ಲಿಕಾ ಸಿಂಗ್ ಅವರ ಮುದ್ದಾದ ಅಭಿನಯಕ್ಕೆ ಮನ ಸೋಲದವರಿಲ್ಲ.
ಮಲ್ಲಿಕಾ ತಾಯಿ ರೂಬಿ ಸಿಂಗ್ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಕೊರಿಯೋಗ್ರಾಫರ್. ಮಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ರೂಬಿ ಮಹಾದಾಸೆ ಆಗಿತ್ತು. ಆದರೆ ನಟನೆ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದ ಮಲ್ಲಿಕಾ, ಅಮ್ಮನ ಆಸೆಗೆ ಮಣಿದು ಈ ಕ್ಷೇತ್ರಕ್ಕೆ ಬಂದಿದ್ದಾರೆ. ತಾಯಿಯ ಸಲಹೆಯಂತೆ ರಾಧಾ ಪಾತ್ರಕ್ಕೆ ಮಲ್ಲಿಕಾ ಆಡಿಷನ್ ಕೊಟ್ಟಾಗ ಕೇವಲ 15 ವರ್ಷ ವಯಸ್ಸು. ಎರಡು ವರ್ಷ ಕಳೆದ ಮೇಲೆ ರಾಧಾ ಪಾತ್ರಕ್ಕೆ ಆಯ್ಕೆಯಾದ ಮಲ್ಲಿಕಾ ಇದೀಗ ರಾಧಾ ಆಗಿ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ.
ಕನ್ನಡಕ್ಕೂ ಡಬ್ ಆಗಿರುವ ಈ ಧಾರಾವಾಹಿ ಇದೀಗ ಕಮಾಲ್ ಮಾಡುತ್ತಿದೆ. ಅದರಲ್ಲೂ ಯುವಜನಾಂಗದ ಹಾಟ್ ಫೆವರೇಟ್ ಈ ರಾಧಾಕೃಷ್ಣ. ತನ್ನ ಮುಗ್ಧತೆಯಿಂದ, ಅಭಿನಯದಿಂದ ಮಲ್ಲಿಕಾ ಎಲ್ಲರನ್ನೂ ಸೆಳೆದಿದ್ದಾರೆ. ಮೊದಲ ಧಾರಾವಾಹಿಯಲ್ಲೇ ಎಷ್ಟೋ ಜನರ ಹೃದಯಕ್ಕೆ ಲಗ್ಗೆ ಇಟ್ಟಿರುವ ಈ ಚೆಲುವೆ ಹಾಗೂ ಕೃಷ್ಣ ಪಾತ್ರಧಾರಿಯ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಈ ಜೋಡಿಗೆ ಬೆಸ್ಟ್ ಜೋಡಿ, ಬೆಸ್ಟ್ ಆನ್ಸ್ಕ್ರೀನ್ ಕಪಲ್, ಮೋಸ್ಟ್ ಪಾಪ್ಯುಲರ್ ಜೋಡಿ ಎಂಬ ಪ್ರಶಸ್ತಿಗಳು ಕೂಡಾ ದೊರೆತಿದೆ.