ಧಾರಾವಾಹಿಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ಸಾಮಾನ್ಯವಾಗಿಹೋಗಿದೆ. ಇದೀಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಅಮ್ಮ ಸುಹಾಸಿನಿ ಆಗಿ ನಟಿಸುತ್ತಿದ್ದ ಅರ್ಚನಾ, ವೈಯಕ್ತಿಕ ಕಾರಣಗಳಿಂದ ಈ ಧಾರಾವಾಹಿಯಿಂದ ಹೊರ ಹೋಗಿದ್ದಾರೆ.
ಅರ್ಚನಾ ಜಾಗಕ್ಕೆ ಸ್ವಾತಿ ಬಂದಿದ್ದು ಇನ್ಮುಂದೆ ವೇದಾಂತ್ ತಾಯಿ ಸುಹಾಸಿನಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಸ್ವಾತಿಗೆ ಕಿರುತೆರೆ ಹೊಸತೇನಲ್ಲ. ಇತ್ತೀಚೆಗಷ್ಟೇ ಪ್ರಸಾರ ನಿಲ್ಲಿಸಿದ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ಅಮ್ಮ ಜಯಂತಿ ಆಗಿ ಸ್ವಾತಿ ಅಭಿನಯಿಸಿದ್ದರು. ಮಾತ್ರವಲ್ಲ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕ ಶಂಕರನ ಚಿಕ್ಕಮ್ಮ ಭೈರವಿ ಆಗಿ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದರು.
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಸ್ವಾತಿ ಶುಭ ವಿವಾಹ ಧಾರಾವಾಹಿಯಲ್ಲಿ ಊರ್ಮಿಳಾ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಪುಟ್ಟಗೌರಿ ಮದುವೆ ಧಾರಾವಾಹಿ'ಯಲ್ಲಿ ಮಂಡೋದರಿ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು. 'ಶುಭ ವಿವಾಹ'ದ ನಂತದ ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲೂ ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿದ್ದ ಸ್ವಾತಿ ಮೊದಲ ಬಾರಿ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಿದ್ದು 'ರಂಗನಾಯಕಿ'ಯಲ್ಲಿ. ನಾಯಕನ ಅಮ್ಮನಾಗಿ ನಟಿಸಿದ್ದ ಸ್ವಾತಿ ಮತ್ತೆ ಅನಾರೋಗ್ಯದ ಕಾರಣದಿಂದ ನಟನೆಯಿಂದ ಕೊಂಚ ದೂರವಿದ್ದರು.
ಇದೀಗ 'ಗಟ್ಟಿಮೇಳ'ದ ಸುಹಾಸಿನಿಯಾಗಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸ್ವಾತಿ ನಟಿ ಮಾತ್ರವಲ್ಲ, ಮಾಡೆಲ್ ಕೂಡಾ ಹೌದು. ಸನ್ ಸಿಲ್ಕ್ ನಡೆಸಿದ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಪಡೆದುಕೊಂಡಿದ್ದ ಈಕೆ, ಆ ಸ್ಪರ್ಧೆಯಲ್ಲಿ ಐ ಬ್ಯೂಟಿ, ಫೋಟೋಜೆನಿಕ್ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.