ನಟನಾ ಲೋಕ ಎಂಬುದು ಸಾಗರ ಇದ್ದ ಹಾಗೆ. ಈ ಸಾಗರದಲ್ಲಿ ಈಜು ಗೆಲ್ಲಬೇಕು ಎಂದರೆ ಕೇವಲ ಪ್ರತಿಭೆ, ಸೌಂದರ್ಯ ಮಾತ್ರವಲ್ಲ ಜೊತೆಗೆ ಅದೃಷ್ಟ ಕೂಡಾ ಇರಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ.
ಕಿರುತೆರೆಯ ಖ್ಯಾತ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ವಿಲನ್ ಸಾಹಿತ್ಯ ಆಗಿ ಅಭಿನಯಿಸುತ್ತಿರುವ ಮಲೆನಾಡ ಕುವರಿ ಶರಣ್ಯಾ ಶೆಟ್ಟಿ ಮಾಡೆಲಿಂಗ್ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದವರು. ಒಂದಷ್ಟು ಫ್ಯಾಷನ್ ಶೋಗಳಲ್ಲಿ ಕ್ಯಾಟ್ವಾಕ್ ಮಾಡಿರುವ ಶರಣ್ಯಾಗೆ ಜನಪ್ರಿಯತೆ ತಂದುಕೊಟ್ಟಿರುವುದು 'ಗಟ್ಟಿಮೇಳ'ದ ಸಾಹಿತ್ಯ ಪಾತ್ರ. ಮಿಸ್ ಸೋಷಿಯಲ್ ಮೀಡಿಯಾ 2018 ಹಾಗೂ ಮಿಸ್ ಬ್ಯೂಟಿಫುಲ್ ಸ್ಮೈಲ್ 2018 ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಶಿವಮೊಗ್ಗದ ಚೆಲುವೆ ಶರಣ್ಯಾ ಶೆಟ್ಟಿ, ಮಿಸ್ ಸೌತ್ ಇಂಡಿಯಾ 2019 ಆಗಿ ಕೂಡಾ ಮಿಂಚಿದರು.
ತದ ನಂತರ ಕಿರುತೆರೆಯತ್ತ ಮುಖ ಮಾಡಿದ ಚೆಲುವೆ ಅಲ್ಲೂ ಸೈ ಎನಿಸಿಕೊಂಡರು. 'ಮಾಡೆಲಿಂಗ್ ಕ್ಷೇತ್ರಕ್ಕೂ ನಟನಾ ಲೋಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮಾಡೆಲಿಂಗ್ ಲೋಕಕ್ಕೆ ನಾನು ಪರಿಚಿತ ಮುಖ. ಮಾತ್ರವಲ್ಲ ಅಲ್ಲಿ ನನಗೆ ಸರಿಯಾದ ಗೌರವವೂ ದೊರಕಿತ್ತು. ಆದರೆ ನಟನಾ ಲೋಕ ತುಂಬ ಭಿನ್ನ. ಇಲ್ಲಿ ಒಂದು ಶೂಟ್ಗೆ ದಿನವಿಡೀ ಕಾಯಬೇಕಾಗುತ್ತಿತ್ತು. ಎಲ್ಲಿ ನನ್ನನ್ನು ತಿರಸ್ಕಾರ ಮಾಡುತ್ತಾರೆ ಎಂದು ಭಯ ಪಟ್ಟಿದ್ದೆ' ಎನ್ನುತ್ತಾರೆ ಶರಣ್ಯಾ ಶೆಟ್ಟಿ.
ಧಾರಾವಾಹಿಯ ಪಯಣ ಎಂದ ಕೂಡಲೇ ಶರಣ್ಯಾಗೆ ಒಂದು ಘಟನೆ ಸದಾ ನೆನಪಿನಲ್ಲಿ ಇರುತ್ತದೆ. ಅದು ಆಕೆ 'ಗಟ್ಟಿಮೇಳ' ಧಾರಾವಾಹಿಗೆ ಕಾಲಿಟ್ಟ ಹೊಸತು. ಒಂದು ದಿನ ಆಕೆ ಬಿಎಂಟಿಸಿ ಬಸ್ನಲ್ಲಿ ಹೋಗುತ್ತಿದ್ದರು. ಆಗ ಒರ್ವ ಹೆಂಗಸು ಮೊಬೈಲ್ನಲ್ಲಿ 'ಗಟ್ಟಿಮೇಳ' ಧಾರಾವಾಹಿ ನೋಡುತ್ತಿದ್ದರು. ಅದು ಕೂಡಾ ನನ್ನ ಆರಂಭದ ಎಪಿಸೋಡ್ಗಳು. ಜನರು ನಾನು ಅಭಿನಯಿಸಿರುವ ಧಾರಾವಾಹಿ ನೋಡುತ್ತಾರೆ ಎಂಬ ಸಂತಸ ಒಂದೆಡೆಯಾದರೆ, ಆಕೆ ತನ್ನನ್ನು ಗುರುತಿಸಿಲ್ಲ ಎಂಬ ಬೇಸರ ಇನ್ನೊಂದೆಡೆ. ಜೊತೆಗೆ ಜನ ನನ್ನನ್ನು ಸ್ವೀಕರಿಸುತ್ತಾರಾ ಎಂಬ ಭಯ ಮನದ ಮೂಲೆಯಲ್ಲಿತ್ತು ಎನ್ನುವ ಶರಣ್ಯಾ ಇದೀಗ ತಮ್ಮ ಕಿರುತೆರೆ ಜರ್ನಿಯಲ್ಲಿ ಯಶಸ್ಸು ಪಡೆದಿದ್ದಾರೆ. ಜನ ಇಂದು ಗಟ್ಟಿಮೇಳ ಧಾರಾವಾಹಿಯ ಸಾಹಿತ್ಯ ಎಂದು ಕರೆದಾಗ ಹೆಮ್ಮೆಯೆನಿಸುತ್ತದೆ ಎಂದು ಹೇಳುತ್ತಾರೆ.