ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಸಾರಿಕಾ ಪಾತ್ರಕ್ಕೆ ಜೀವ ತುಂಬುತ್ತಿರುವ ಕೊಡಗಿನ ಕುವರಿ ರಶ್ಮಿತಾ ಚಂಗಪ್ಪ ಮಹಾರಾಣಿ ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿದವರು. ತದ ನಂತರ ಸಾರಿಕಾ ಆಗಿ ವೀಕ್ಷಕರ ಮನ ಸೆಳೆದಿರುವ ರಶ್ಮಿತಾ, ಸದ್ಯ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದಿದ್ದರೂ ಅವರ ಗೈರು ಹಾಜರಿ ಎದ್ದು ಕಾಣುತ್ತಿರುವುದು ನಿಜ.
ಸಾರಿಕಾ ಪಾತ್ರದಿಂದ ಸದ್ಯ ದೂರವಾಗಿರುವ ರಶ್ಮಿತಾ ಚಂಗಪ್ಪ, ಧಾರಾವಾಹಿಯ ಬಗ್ಗೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಗಟ್ಟಿಮೇಳದಲ್ಲಿ ವಿಲನ್ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ನಾನು ಹಿಂದೆ ಮುಂದೆ ಆಲೋಚಿಸಲಿಲ್ಲ. ಏಕೆಂದರೆ ನನಗೆ ಸಾರಿಕಾ ಪಾತ್ರ ತುಂಬಾ ಹಿಡಿಸಿತು. ಎಲ್ಲದಕ್ಕಿಂತಲೂ ಮುಖ್ಯವಾಗಿ ನಾನು ನೆಗೆಟಿವ್ ಪಾತ್ರದಲ್ಲಿ ನಟಿಸಲು ಬಹಳ ದಿನಗಳಿಂದ ಕಾಯುತ್ತಿದ್ದೆ. ಮತ್ತು ಅದೇ ಕಾರಣದಿಂದ ನಾನು ಸಾರಿಕಾ ಆಗಿ ಬದಲಾದೆ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ರಶ್ಮಿತಾ.
ಸಾರಿಕಾ ಪಾತ್ರವನ್ನು ನಿಜಕ್ಕೂ ನಾನು ಬಹಳ ಎಂಜಾಯ್ ಮಾಡಿದ್ದೇನೆ. ಒಂದರ್ಥದಲ್ಲಿ ಪರಾಕಾಯ ಪ್ರವೇಶ ಮಾಡಿದೆ ಎನ್ನಬಹುದು. ಅದೇ ಕಾರಣದಿಂದ ತೆರೆಯ ಮೇಲೆ ಪಾತ್ರ ಬಹು ಅಂದವಾಗಿ ಮೂಡಿದೆ ಎಂಬುದು ನನ್ನ ಅಭಿಪ್ರಾಯ ಎನ್ನುವ ರಶ್ಮಿತಾಗೆ ಸಾರಿಕಾ ಪಾತ್ರ ಇದ್ದಕ್ಕಿದ್ದಂತೆ ಅಂತ್ಯ ಕಂಡಿರುವುದು ಬೇಸರವಾಗಿದೆಯಂತೆ. ಗಟ್ಟಿಮೇಳದಲ್ಲಿ ನಾನು ಪ್ರಸ್ತುತ ಸಾರಿಕಾ ಪಾತ್ರದಲ್ಲಿ ನಟಿಸುತ್ತಿಲ್ಲ. ಸದ್ಯಕ್ಕೆ ಸಾರಿಕಾ ಪಾತ್ರ ಪ್ರಸಾರವಾಗುತ್ತಿಲ್ಲ. ಮತ್ತೆ ಯಾವಾಗ ನನ್ನ ಪಾತ್ರ ತೆರೆ ಮೇಲೆ ಬರುವುದೋ ನನಗೂ ತಿಳಿದಿಲ್ಲ. ಆದರೂ ಜನರು ನನ್ನನ್ನು ಸ್ವೀಕರಿಸಿದ್ದಾರೆ ಎಂಬ ಖುಷಿ ಇದೆ ಎನ್ನುತ್ತಾರೆ ಈ ನಟಿ.
ಜನರು ಸೋಷಿಯಲ್ ಮೀಡಿಯಾ ಹಾಗೂ ಹೊರಗೆ ಹೋದಾಗ ಮತ್ತೆ ನಿಮ್ಮ ಪಾತ್ರ ಯಾವಾಗ ಬರುತ್ತದೆ ಎಂದು ಕೇಳುತ್ತಾರೆ. ಇದಕ್ಕಿಂತ ಸಂತೋಷದ ವಿಚಾರ ಬೇರೆ ಏನು ಬೇಕಿದೆ. ಇದು ಬಹಳ ವಿಭಿನ್ನ ಪಾತ್ರ. 48 ಗಂಟೆ ಮೇಕಪ್ ತೆಗೆಯದೆ ಇರಬೇಕಾಗಿತ್ತು. ಅದು ಕಿರಿಕಿರಿ ಎನಿಸಿದರೂ ಜನರು ನನ್ನನ್ನು ಒಪ್ಪಿಕೊಂಡಿರುವುದು ಬಹಳ ಖುಷಿ ನೀಡಿದೆ ಎನ್ನುತ್ತಾರೆ ರಶ್ಮಿತಾ.