ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಗಳು ಜಾನಕಿ ಧಾರಾವಾಹಿಯಲ್ಲಿ ಜಾನಕಿ ಆಗಿ ನಟಿಸಿ ರಾಜ್ಯಾದ್ಯಂತ ಮನೆ ಮಾತಾಗಿರುವ ಚಿಕ್ಕಮಗಳೂರಿನ ಚೆಲುವೆ ಹೆಸರು ಗಾನವಿ ಲಕ್ಷ್ಮಣ್. ಗಾನವಿ ಧಾರಾವಾಹಿ ಮಾತ್ರವಲ್ಲ ಬೆಳ್ಳಿತೆರೆಯಲ್ಲೂ ನಟಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಒಲವು ಹೊಂದಿದ್ದ ಗಾನವಿಗೆ ನೃತ್ಯದತ್ತ ವಿಶೇಷ ಒಲವು. ನೃತ್ಯದ ಮೇಲೆ ತಮಗಿದ್ದ ಅದಮ್ಯ ಪ್ರೀತಿಯಿಂದ ನೃತ್ಯ ಶಿಕ್ಷಕಿಯಾಗಿ ಬದಲಾದ ಗಾನವಿ ಲಕ್ಷ್ಮಣ್ಗೆ ಮಕ್ಕಳಿಗೆ ನೃತ್ಯ ಹೇಳಿಕೊಡಬೇಕೆಂಬ ಕನಸಿತ್ತು. ಅದೇ ಕಾರಣಕ್ಕೆ ನೃತ್ಯ ಶಿಕ್ಷಕಿಯಾಗಿ ವಸತಿ ಶಾಲೆಯೊಂದಕ್ಕೆ ಸೇರಿದರು. ಕಲೆಯ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಮೂಡಿದಾಗ ಕೆಲಸಕ್ಕೆ ಗುಡ್ಬೈ ಹೇಳಿ ದೇಶ ತಿರುಗಲು ಹೊರಟರು. ನಾನಾ ದೇಶ ಸುತ್ತಿದ ಗಾನವಿ ಮುಂದೆ ಡಾನ್ಸ್, ಮಾರ್ಷಲ್ ಆರ್ಟ್ಸ್, ನಟನೆ ಸೇರಿ ಕಲೆಯ ನಾನಾ ಪ್ರಾಕಾರಗಳಲ್ಲಿ ಪಳಗಿದರು. ರಂಗಭೂಮಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರುವ ಗಾನವಿಗೆ ನಟನೆ ಬಗ್ಗೆ ಆಸಕ್ತಿ ಹೆಚ್ಚಾದಾಗ ಆಡಿಷನ್ನಲ್ಲಿ ಭಾಗವಹಿಸಲು ಆರಂಭಿಸಿದರು. ಆದರೆ ಎಲ್ಲಿ ಹೋದರೂ ಅವರಿಗೆ ಅವಕಾಶ ದೊರೆಯಲಿಲ್ಲ. ಕೊನೆಗೆ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗೆ ಅವರು ಆಯ್ಕೆಯಾದರು.
ತಮ್ಮ ಮೊದಲ ಕಿರುತೆರೆ ಪಯಣ 'ಮಗಳು ಜಾನಕಿ' ಧಾರಾವಾಹಿಯಿಂದ ಆರಂಭವಾದದ್ದಕ್ಕೆ ಗಾನವಿ ಅವರು ತುಂಬಾನೇ ಖುಷಿಯಲ್ಲಿದ್ದಾರೆ. ‘ಮಗಳು ಜಾನಕಿ' ಧಾರಾವಾಹಿಯ ಜಾನಕಿ ಪಾತ್ರ ನನಗೆ ಬಯಸದೇ ಬಂದ ಭಾಗ್ಯ. ಆಡಿಷನ್‌ಗೆ ಹೋದಾಗ ಸೀತಾರಾಮ್ ಸರ್ ಅವರು ಸ್ಟುಡಿಯೋದಲ್ಲಿ ಇರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಅವರೆದುರು ಆಡಿಷನ್ ನೀಡಿದ್ದು ತುಂಬಾ ಖುಷಿಯಾಗಿತ್ತು ಎನ್ನುತ್ತಾರೆ ಗಾನವಿ ಲಕ್ಷ್ಮಣ್. 'ಮಗಳು ಜಾನಕಿ' ಧಾರಾವಾಹಿಯ ಸೆಟ್ ತುಂಬಾ ಅದ್ಭುತವಾದುದು. ಟಿ.ಎನ್. ಸೀತಾರಾಮ್ ಅವರಲ್ಲಿ ಒಂದು ಪಾಸಿಟಿವ್ ಶಕ್ತಿ ಇದೆ. ತಮ್ಮಲ್ಲಿರುವ ಶಕ್ತಿಯನ್ನು ಅವರು ತಮ್ಮ ಜೊತೆ ಇರುವವರಲ್ಲೂ ಮೂಡುವಂತೆ ಮಾಡುತ್ತಾರೆ ಎಂದು ಹೇಳುತ್ತಾರೆ ಗಾನವಿ.
ಇನ್ನು 'ಮಗಳು ಜಾನಕಿ' ಧಾರಾವಾಹಿಯಲ್ಲಿ ಸೀರೆ, ಐಪಿಎಸ್ ಯೂನಿಫಾರ್ಮ್ನಲ್ಲಿ ಕಾಣಿಸಿಕೊಂಡಿರುವ ಗಾನವಿ ಅವರ ಮಾಡ್ರನ್ ಲುಕ್ ಕೂಡಾ ಎಲ್ಲರನ್ನು ಆಕರ್ಷಿಸುತ್ತಿದೆ. ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ನಟಿಸುತ್ತಿರುವ ಗಾನವಿ ಸದ್ಯ ಮಗಳು ಜಾನಕಿಯಾಗಿ ಬ್ಯುಸಿ. ಮಾತ್ರವಲ್ಲ ಅವರೆಲ್ಲಿ ಹೋದರೂ ಜನ ಅವರನ್ನು ಗುರುತಿಸುವುದು ಮಗಳು ಜಾನಕಿಯಾಗಿಯೇ.