ನಟಿ ಶ್ರುತಿ ಕಿರುತೆರೆಗೆ ಕಾಲಿಟ್ಟಿದ್ದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಸೇವಂತಿ’ ಎಂಬ ಧಾರಾವಾಹಿಯ 100 ನೇ ಕಂತಿನಿಂದ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಈಗಾಗಲೇ ಕಿರುತೆರೆಯಲ್ಲಿ ‘ಮಜಾ ಭಾರತ‘ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಈಗ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ಧಾರಾವಾಹಿಯ ಸುಮಾರು 5 ಕಂತುಗಳಲ್ಲಿ ಶ್ರುತಿ ನಟಿಸಲಿದ್ದಾರೆ. ನಿನ್ನೆ ಧಾರಾವಾಹಿಯ ಡಬ್ಬಿಂಗ್ ಮುಗಿಸಿಕೊಂಡು ಚಿತ್ರವೊಂದರ ಸುದ್ದಿಗೋಷ್ಠಿಗೆ ಬಂದಿದ್ದರು.
ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ‘ಮೋಹನದಾಸ‘ ಎಂಬ ಸಿನಿಮಾದಲ್ಲಿ ಶ್ರುತಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಮಹಾತ್ಮಗಾಂಧಿ ತಾಯಿ ಪುತಲೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪತಿ ಕರಮ್ಚಂದ್ ಗಾಂಧಿ ಪಾತ್ರದಲ್ಲಿ ಹಿರಿಯ ಹಿಂದಿ ಹಾಗೂ ಮರಾಠಿ ನಟ, ನಿರ್ದೇಶಕ, ಬರಹಗಾರ ಅನಂತ್ ಮಹಾದೇವನ್ ಅಭಿನಯಿಸಿದ್ದಾರೆ. ಇದು ಪಿ. ಶೇಷಾದ್ರಿ ನಿರ್ದೇಶನದ ಸಿನಿಮಾ. ಶ್ರುತಿ ಪ್ರಕಾರ ‘ಪುಟ್ಟಕ್ಕನ ಹೈ ವೇ’ ನಂತರ ಅವರಿಗೆ ಬಹಳ ಮೆಚ್ಚುಗೆಯಾದ ಪಾತ್ರವಂತೆ ಇದು.
ತಾಯಿ ಹೇಳಿದ ಕಥೆಗಳಿಂದ ಪುಟ್ಟ ಬಾಲಕ ಮೋಹನ ದಾಸ ಪ್ರಭಾವಿತ ಆಗಿರುವುದು ಇಲ್ಲಿ ಪ್ರಮುಖ ಅಂಶ. ಮಹಾತ್ಮ ಗಾಂಧೀಜಿ ಅವರ ಬಾಲ್ಯದ ದಿವಸಗಳ ಬಗ್ಗೆ ಅಂದರೆ 1879 ರಿಂದ 1895 ವರೆಗೆ ಮಾತ್ರ ಈ ಸಿನಿಮಾದಲ್ಲಿ ಕಾಣಬಹುದು. ಇತಿಹಾಸ ಬರೆಯುವ ಚಿತ್ರಗಳಲ್ಲಿ ಅಭಿನಯಿಸಬೇಕು ಅಥವಾ ಇತಿಹಾಸ ಬರೆದವರ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ತಾರೆ ಶ್ರುತಿ ಅವರ ಸಂಕಲ್ಪ.