ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಗೂ ಮೊದಲೇ ಸಿಕ್ಕಾಪಟ್ಟೇ ಸದ್ದು ಮಾಡುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ನಟನೆ ಜತೆಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾದ ಮೇಲೆ ವಿಜಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈಗಾಗಲೇ ಟೀಸರ್ ಹಾಗೂ ರಿಲೀಸ್ ಆಗಿರುವ ಹಾಡುಗಳಿಗೆ ವಿಜಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಲಗ ಸಿನಿಮಾ ಥಿಯೇಟರ್ಗೆ ಬರೋದನ್ನ ಕಾತರದಿಂದ ಕಾಯುತ್ತಿರುವ ಫ್ಯಾನ್ಸ್, ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನ ಮೆರೆದಿದ್ದಾರೆ.
ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಕಟೌಟ್ಗಳಿಗೆ ಹಾಲಿನ ಅಭಿಷೇಕ ಹಾಗೂ ಹೂವಿನ ಹಾರ ಹಾಕುವುದು ಸಾಮಾನ್ಯ. ಆದರೆ, ದುನಿಯಾ ವಿಜಯ್ ಅಭಿಮಾನಿಗಳು ಸಲಗ ಚಿತ್ರದ ಹೆಸರನ್ನ, ಎದೆ ಹಾಗೂ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸಲಗ ಚಿತ್ರದ ಕ್ರೇಜ್ ಅನ್ನು ಹೆಚ್ಚಿಸಿದ್ದಾರೆ.
10ಕ್ಕೂ ಹೆಚ್ಚು ಅಭಿಮಾನಿಗಳು ಕೈ ಹಾಗೂ ಎದೆ ಮೇಲೆ ಸಲಗ ಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟ ದುನಿಯಾ ವಿಜಯ್ಗೆ ತಮ್ಮ ಅಭಿಮಾನ ತೋರಿಸಿದ್ದಾರೆ. ಅಭಿಮಾನಿಗಳ ಈ ಅಭಿಮಾನಕ್ಕೆ ಖುದ್ದು ವಿಜಯ್ ಭಾವುಕರಾಗಿ ಶರಣಾಗಿದ್ದಾರೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಸಲಗ ಚಿತ್ರದಲ್ಲಿ ಡಾಲಿ ಧನಂಜಯ್, ಸಂಜನಾ ಆನಂದ್, ಹೀಗೆ ಹಲವು ತಾರೆಯರು ನಟಿಸಿದ್ದಾರೆ. ಚರಣ್ ರಾಜ್ ಸಂಗೀತವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
ಗಾಯಕಿ ಗಿರಿಜಾ ಸಿದ್ಧಿ ಹಾಡಿರುವ ಟಿಣಿಂಗಾ ಮಿಣಿಂಗಾ ಟಿಶ್ಯಾ ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿದೆ. ಈ ಹಾಡು ಸೂಪರ್ ಹಿಟ್ ಆಗಿದೆ. ಟಗರು ಸಿನಿಮಾ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.
ಸದ್ಯ ಕೊರೊನಾದಿಂದಾಗಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ಇರುವ ಕಾರಣ, ಸಲಗ ಚಿತ್ರವನ್ನ ನಿರ್ಮಾಪಕ ಕೆ ಪಿ ಶ್ರೀಕಾಂತ್ ಬಿಡುಗಡೆ ಮಾಡಿಲ್ಲ. ಸರ್ಕಾರ ಥಿಯೇಟರ್ಗಳಲ್ಲಿ ಶೇ.100ರ ಅನುಮತಿ ನೀಡಿದ ಬಳಿಕ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.