ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗುವುದು, ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇತರರಿಗೆ ಸಂದೇಶ ಕಳಿಸುವುದು, ಹಣಕ್ಕಾಗಿ ಡಿಮ್ಯಾಂಡ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಕಿರುತೆರೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯೊಂದು ಸೃಷ್ಟಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿಯಾಗಿದ್ದು ಈ ಖಾತೆ ಮೂಲಕ ಇತರರಿಗೆ ಸಂದೇಶ ಕಳಿಸುವುದಲ್ಲದೆ ಅವರಿಗೆ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದ ಟಿ.ಎನ್. ಸೀತಾರಾಮ್ "ನನ್ನ ಫೇಸ್ ಬುಕ್ ಖಾತೆಯನ್ನು ನಕಲು ಮಾಡಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಹಣವನ್ನೂ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಆದ್ದರಿಂದ ನನ್ನ ಹೆಸರಿನಲ್ಲಿ ಯಾರಿಗಾದರೂ ಏನಾದರೂ ಸಂದೇಶಗಳು ಬಂದಿದ್ದಲ್ಲಿ ಅದನ್ನು ನಂಬಬೇಡಿ ಹಾಗೂ ನಿರ್ಲಕ್ಷಿಸಿ. ಇದರ ಬಗ್ಗೆ ನಾನು ಸಂಬಂಧ ಪಟ್ಟ ಪೋಲೀಸರಿಗೆ ದೂರು ನೀಡಿದ್ದೇನೆ. ಯಾರೂ ಯಾವ ರೀತಿಯ ವ್ಯವಹಾರವನ್ನೂ ದಯವಿಟ್ಟು ಇಟ್ಟುಕೊಳ್ಳಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಿರ್ದೇಶಕ ಟಿ.ಎನ್. ಸೀತಾರಾಮ್ ಇತ್ತೀಚೆಗಷ್ಟೇ ಲೈವ್ ಬಂದು ತಮ್ಮ ಅಭಿಪ್ರಾಯ, ಅನಿಸಿಕೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದರು. ಅಲ್ಲದೆ ಇತ್ತೀಚಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನದ ಸಂದರ್ಭದಲ್ಲಿ ಹಾಡೊಂದನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದರು.