ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದ್ದೂರಿಯಾಗಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ರಾಬರ್ಟ್' ಸಿನಿಮಾ ನಾಲ್ಕು ದಿನಕ್ಕೆ ಬಾಕ್ಸ್ ಆಫೀಸ್ ಲೂಟಿ ಮಾಡಿದೆ. ಕಳೆದ ಗುರುವಾರ ಶಿವರಾತ್ರಿ ಹಬ್ಬದಂದು ಬಿಡುಗಡೆ ಆಗಿದ್ದ 'ರಾಬರ್ಟ್' ಮೊದಲ ದಿನವೇ 17.24 ಕೋಟಿ ರೂಪಾಯಿ ಗಳಿಸಿತ್ತು. ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಪ್ರೇಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಜುಲೈನಲ್ಲಿ 2ನೇ ಮಗು ಆಗಮನದ ನಿರೀಕ್ಷೆ.. ಸಂತಸ ಹಂಚಿಕೊಂಡ ಹರ್ಭಜನ್-ಗೀತಾ ದಂಪತಿ!
ಎರಡನೇ ದಿನ 12.28 ಕೋಟಿ ರೂಪಾಯಿ, ಮೂರನೇ ದಿನ 14.10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಕರ್ನಾಟಕದಲ್ಲಿ ರಾಬರ್ಟ್ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ. ಇನ್ನು ತೆಲುಗು ಭಾಷೆಯ ಕಲೆಕ್ಷನ್ ಲೆಕ್ಕಚಾರವನ್ನೂ ಸೇರಿಸಿ ನೋಡೋದಾದ್ರೆ 'ರಾಬರ್ಟ್' ಸಿನಿಮಾ ಮೂರೇ ದಿನದಲ್ಲಿ 59.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅರ್ಧ ಕೋಟಿ ಕ್ಲಬ್ ಸೇರಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಾಲ್ಕು ದಿನಕ್ಕೆ 6.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.
ಚಿತ್ರಕ್ಕಿರುವ ಪ್ರತಿಕ್ರಿಯೆ ನೋಡುತ್ತಿದ್ದರೆ ಕೆಲವೇ ದಿನಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಹಿಂದೆ 'ಕುರುಕ್ಷೇತ್ರ' ಸಿನಿಮಾ ಕೂಡಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ 'ರಾಬರ್ಟ್' ಸಿನಿಮಾ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದೆ. ಈ ಮೂಲಕ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಚಿತ್ರಮಂದಿರಗಳ ಮಾಲೀಕರು ಹಾಗೂ ಸಿನಿಮಾ ರಂಗಕ್ಕೆ 'ರಾಬರ್ಟ್'ನಿಂದ ಮರು ಜೀವ ಬಂದಂತೆ ಆಗಿದೆ.