ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಈಗಾಗಲೇ ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಮೂರನೇ ಸೀಸನ್ ಕೂಡಾ ಅದ್ಧೂರಿಯಾಗಿ ಅರಂಭವಾಗಿದ್ದು ತಿಳಿದೇ ಇದೆ. ಇದೀಗ 'ಕಾಮಿಡಿ ಕಿಲಾಡಿಗಳು' ಮೂರನೇ ಸೀಸನ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.

ಪ್ರತಿ ವಾರವೂ ನವಿರಾದ ಹಾಸ್ಯದ ಮೂಲಕ ಜನರ ಮನ ಸೆಳೆಯುತ್ತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಇದೀಗ ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇದೇ ವಾರಾಂತ್ಯದಲ್ಲಿ ಬಹಳ ಅದ್ಧೂರಿಯಾಗಿ ನಡೆಯಲಿದೆ. ಇದೇ ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಅರಸೀಕೆರೆಯ ಶ್ರೀ ಜೇನುಕಲ್ ಸ್ಟೇಡಿಯಂನಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ 3 ರ ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿದೆ. ಕಾಮಿಡಿಪ್ರಿಯರಿಗೆ ನೇರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶವಿದೆ. ಕಾರ್ಯಕ್ರಮದ ಪಾಸುಗಳು ಹಿಂದಿನ ದಿನ ಅಂದರೆ ಶನಿವಾರ ಸಂಜೆ 4 ಗಂಟೆಗೆ ಅರಸೀಕೆರೆ ಸ್ಟೇಡಿಯಂನಲ್ಲಿ ಸಿಗಲಿದೆ. ಮಾಸ್ಟರ್ ಆನಂದ್ನಿರೂಪಣೆಯಲ್ಲಿ ಮೂಡಿ ಬರಲಿರುವ ಈ ಫಿನಾಲೆ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ಪಟ್ಟ ಯಾರ ಮುಡಿ ಸೇರಲಿದೆ ಎಂಬ ಕುತೂಹಲ ವೀಕ್ಷಕರಿಗಿದೆ. ತೀರ್ಪುಗಾರಾಗಿರುವ ನವರಸ ನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್ ಮತ್ತು ಕ್ರೇಜಿಕ್ವೀನ್ ರಕ್ಷಿತಾ ಸಾರಥ್ಯದಲ್ಲಿ ಈ ಗ್ರ್ಯಾಂಡ್ ಫಿನಾಲೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನು ಉಣಬಡಿಸುವುದರಲ್ಲಿ ಎರಡು ಮಾತಿಲ್ಲ.