ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಹಲವರು ಇಂದು ನಟನಾ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ನಯನಾ ಸರದಿ. ಕಾಮಿಡಿ ಕಿಲಾಡಿಗಳು ಸೀಸನ್ 1 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಯನಾ, ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪ್ರತಿ ವಾರವೂ ವಿಭಿನ್ನ ಕಾನ್ಸೆಪ್ಟ್ ಮೂಲಕ ಪ್ರೇಕ್ಷಕರಿಗೆ ನಗುವಿನ ಕಚಗುಳಿಯಿಡುತ್ತಿದ್ದ ನಯನಾ ಫಿನಾಲೆ ತನಕ ಹೋಗಿ ಎರಡನೇ ಸ್ಥಾನ ಕೂಡಾ ಪಡೆದಿದ್ದರು.
- " class="align-text-top noRightClick twitterSection" data="
">
ಯಾವುದೇ ಪಾತ್ರ ನೀಡಿದರೂ ಸೈ ಎನ್ನುತ್ತಿದ್ದರು ನಯನಾ ಶರತ್. ತಮಗೆ ನೀಡಿದ ಪಾತ್ರಕ್ಕೆ ನಿರಾಂತಕವಾಗಿ ಜೀವ ತುಂಬುತ್ತಿದ್ದ ನಯನಾ ಜ್ಯೂನಿಯರ್ ಉಮಾಶ್ರೀ ಎಂದೇ ಬಿರುದು ಪಡೆದಿದ್ದರು. ಇದು ಆಕೆಯಲ್ಲಿ ಇರುವ ನಟನಾ ಕಲೆಗೆ ಉತ್ತಮ ಸಾಕ್ಷಿ. ಸ್ವತ: ಉಮಾಶ್ರೀ ಅವರೇ ನಯನಾ ಆ್ಯಕ್ಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಂತರ ನಯನಾಗೆ ಬಣ್ಣದ ಲೋಕದಿಂದ ಅವಕಾಶಗಳ ಸುರಿಮಳೆ ದೊರಕಿತು. ಬಂದ ಅವಕಾಶವನ್ನು ಬೇಡ ಎನ್ನದ ನಯನಾ ಈಗ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು v/s ನುಸ್ರತ್' ಸಿನಿಮಾದಲ್ಲಿ ಲಾಯರ್ ಆಗಿ ನಟಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ನಯನಾ ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಸೀತಾರಾಮಕಲ್ಯಾಣ' ಸಿನಿಮಾದಲ್ಲಿ ಚಿಕ್ಕಣ್ಣನ ಹೆಂಡತಿಯಾಗಿ ನಟಿಸಿದ್ದರು. ನಂತರ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಸಿನಿಮಾದಲ್ಲಿ ಕೂಡಾ ನಟಿಸಿದ್ದರು. ಇದೀಗ ಬಹಳ ದಿನಗಳ ನಂತರ ಈಗ ನಯನಾ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ.
ಇದನ್ನೂ ಓದಿ: ಈ ಫೋಟೋದಲ್ಲಿರುವ ಚಿಕ್ಕ ಮಕ್ಕಳು ಯಾರೆಂದು ಗುರುತಿಸುವಿರಾ?
ಆದರೆ ಈ ಬಾರಿ ನಯನಾ ಯಾವುದೇ ರಿಯಾಲಿಟಿ ಶೋನಲ್ಲಿ ನಟಿಸುತ್ತಿಲ್ಲ. ಧಾರಾವಾಹಿಯ ಮೂಲಕ ನಯನಾ ಕಿರುತೆರೆಗೆ ಮತ್ತೆ ವಾಪಸಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಎಡೆಯೂರು ಶ್ರೀಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ನಯನಾ ನಟಿಸುವ ಮೂಲಕ ಕಿರುತೆರೆಗೆ ಕಾಲಿಡಲಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ನಯನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ಕಾಮಿಡಿ ಕಿಲಾಡಿಗಳು ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ನಯನಾ ಇನ್ನು ಮುಂದೆ ಧಾರಾವಾಹಿಯ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ.