ಬಹಳ ವರ್ಷಗಳ ಹಿಂದೆ ಪ್ರಸಾರವಾದ ಕೆಲವು ಧಾರಾವಾಹಿಗಳನ್ನು ಜನರು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 30 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಖ್ಯಾತ ರಾಮಾಯಣ, ಮಹಾಭಾರತ ಧಾರಾವಾಹಿ ಇದೀಗ ಮರುಪ್ರಸಾರವಾಗುತ್ತಿದೆ. ಈ ಧಾರಾವಾಹಿಗಳಿಗೆ ಇಂದಿಗೂ ಬೇಡಿಕೆ ಎಷ್ಟಿದೆ ಎಂದು ಇದರಿಂದ ತಿಳಿಯುತ್ತದೆ.
ಇದೀಗ ಬೆಂಗಳೂರು ದೂರದರ್ಶನ ರಮೇಶ್ ಭಟ್ ಹಾಗೂ ಗಿರಿಜಾ ಲೋಕೇಶ್ ನಟಿಸಿದ್ದ ಕ್ರೇಜಿ ಕರ್ನಲ್ ಧಾರಾವಾಹಿಯನ್ನು ಮರು ಪ್ರಸಾರ ಮಾಡಲು ಸಜ್ಜಾಗಿದೆ. ಈ ಹಾಸ್ಯ ಧಾರಾವಾಹಿಯಲ್ಲಿ ರಮೇಶ್ ಭಟ್ ಅವರ ದೊಡ್ಡ ನಗುವೇ ಬಹಳ ಹೆಸರಾಗಿತ್ತು. ಇದೀಗ ಈ ಧಾರಾವಾಹಿ ಮರು ಪ್ರಸಾರವಾಗುತ್ತಿರುವುದಕ್ಕೆ ಹಿರಿಯ ನಟ ರಮೇಶ್ ಭಟ್ ಸಂತೋಷ ವ್ಯಕ್ತಪಡಿಸಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
1990 ರಲ್ಲಿ ನಾನು ಸಿನಿಮಾಗಳಲ್ಲಿ ಬಹಳ ಬ್ಯುಸಿ ಇದ್ದೆ. ನಿರ್ದೇಶಕ ಲಿಂಗರಾಜು ಮತ್ತು ನಿರ್ಮಾಪಕ ರಾಜೇಶ್ ಅವರು ಈ ಧಾರಾವಾಹಿಗೆ ನನ್ನನ್ನು ಆಯ್ಕೆ ಮಾಡಿಕೊಂಡರು. ಧಾರಾವಾಹಿ ಕೂಡಾ ಸಕ್ಸಸ್ ಆಯ್ತು. ವಿಶೇಷ ಎಂದರೆ ಈ ಧಾರಾವಾಹಿ ಮೊದಲ ಎಪಿಸೋಡ್ನಲ್ಲಿ ಡಾ. ವಿಷ್ಣುವರ್ಧನ್ ಹಾಗೂ ಪತ್ನಿ ಭಾರತಿ ಈ ಧಾರಾವಾಹಿ ಬಗ್ಗೆ ಮಾತನಾಡಿದ್ದರು. ನಾನು ಬೇರೆ ಸಿನಿಮಾ ಶೂಟಿಂಗ್ಗಳಿಗೆ ಹೊರಗೆ ಹೋಗುವಾಗ ಜನರು ಬಂದು ನನ್ನನ್ನು ಸುತ್ತುವರೆದು ಮಾತನಾಡಲು ಮುಗಿಬೀಳುತ್ತಿದ್ದರು. ಆಗ ವಿಷ್ಣು ಸರ್ ನನ್ನನ್ನು ರೇಗಿಸುತ್ತಿದ್ದರು. ಸರ್ ನೀವು ಧಾರಾವಾಹಿಗೆ ಕೊಟ್ಟ ಪೀಠಿಕೆಯಿಂದಲೇ ಇದೆಲ್ಲಾ ಸಾಧ್ಯವಾಯ್ತು ಎಂದು ನಾನು ಹೇಳುತ್ತಿದ್ದೆ ಎಂದು ರಮೇಶ್ ಭಟ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕ್ರೇಜಿ ಕರ್ನಲ್ ದೂರದರ್ಶನದಲ್ಲೇ ಸುಮಾರು 7 ಬಾರಿ ಪ್ರಸಾರವಾಗಿದೆ. ಇದೀಗ ಮತ್ತೆ 30 ವರ್ಷಗಳ ನಂತರ ಪ್ರಸಾರವಾಗುತ್ತಿರುವುದು ಪ್ಲಸ್ ಪಾಯಿಂಟ್. ಆರಂಭದಲ್ಲಿ ಧಾರಾವಾಹಿ ಕೇವಲ 13 ಎಪಿಸೋಡ್ಗಳು ಪ್ರಸಾರವಾಗಿತ್ತು. ಆದರೆ ಜನಪ್ರಿಯತೆ ಗಳಿಸುತ್ತಿದ್ದಂತೆ 38 ಎಪಿಸೋಡ್ಗಳ ನಿರ್ಮಾಣಕ್ಕೆ ಅನುಮತಿ ದೊರೆಯಿತು. ಸದ್ಯಕ್ಕೆ ಈ ಕ್ರೇಜಿ ಕರ್ನಲ್ ಏಪ್ರಿಲ್ 25 ರಿಂದ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಸಂಜೆ 6 ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿಯಲ್ಲಿ ರಮೇಶ್ ಭಟ್, ಗಿರಿಜಾ ಲೋಕೇಶ್ ಜೊತೆಗೆ ಡಿ.ವಿ. ರಾಜಾರಾಂ, ರಾಜಾರಾವ್, ಶಂಕರ್ ರಾವ್, ಉಮೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ.