ಕನ್ನಡ ಸಿನಿ ರಂಗದಲ್ಲಿ ಹೊಸ ದಾಖಲೆಯನ್ನು ಬರೆದ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಸಿನಿಮಾದಲ್ಲಿ ನಾಯಕ ಆದಿಯ ಬಾಲ್ಯದ ಗೆಳತಿ ಅರ್ಥಾತ್ ಮೊದಲ ಕ್ರಶ್ ರೀಮಾ ಆಗಿ ನಟಿಸಿದ ಗೀತಾ ಭಾರತಿ ಭಟ್ ಕಿರುತೆರೆಯ ಬೆಡಗಿ. ಲವ್ ಮಾಕ್ಟೈಲ್ ನಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಗೀತಾ ಭಾರತಿ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದವರು. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ನಟಿಸಿರುವ ಈಕೆ ತುಳುವಿನ ಮಂಕು ಬಾಯ್ ಫ್ಯಾಕ್ಸಿ ರಾಣಿಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ನಟನಾ ಛಾಪನ್ನು ಮೂಡಿಸಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ಗೀತಾ ಆಲಿಯಾಸ್ ಗುಂಡಮ್ಮಳಾಗಿ ನಟಿಸುತ್ತಿರುವ ಗೀತಾ ಭಾರತಿ ಭಟ್ ಬಯಸದೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಗುಂಡಮ್ಮ ಆಗಿ ಕಿರುತೆರೆ ಯಾನ ಶುರು ಮಾಡಿದ ಗೀತಾ ಭಾರತಿ ಭಟ್ ಅದ್ಭುತ ಸಂಗೀತಗಾರ್ತಿಯೂ ಹೌದು. ನಟನೆಯ ಹೊರತಾಗಿ ಸಂಗೀತವೇ ನನ್ನ ಉಸಿರು ಎಂದು ನಗುನಗುತ್ತಾ ಹೇಳುವ ಗೀತಾ ಅವರು ಕಳೆದ ಹದಿನೈದು ವರುಷಗಳಿಂದ ಸಂಗೀತ ಕಲಿಯುತ್ತಿದ್ದಾರೆ.

ಮೊದಲ ಬಾರಿ ನಾನು ಮೈಕ್ ಹಿಡಿದು ವೇದಿಕೆ ಮೇಲೆ ಬಂದು ಹಾಡಿದಾಗ ನನಗೆ ಕೇವಲ ಐದು ವರುಷ. ಅದು ರಾಜ್ಯೋತ್ಸವದ ಸಂಭ್ರಮ. ಆ ದಿನ ತನ್ನ ಅಮ್ಮನ ಕಚೇರಿಯಲ್ಲಿ ಹಚ್ಚೇವು ಕನ್ನಡದ ದೀಪ ಎಂದು ರಾಗಬದ್ಧವಾಗಿ ಹಾಡಿದ ಆಕೆ ಮುಂದೆ ಶಾಸ್ತ್ರೋಕ್ತವಾಗಿ ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತವನ್ನು ಕಲಿತರು. ಮುಂದೆ ಹಲವು ಸಿನಿಮಾಗಳಿಗೆ ರೀರೆಕಾರ್ಡಿಂಗ್, ಟ್ರ್ಯಾಕ್, ಹಿನ್ನಲೆ ಗೀತೆಗಳನ್ನು ಹಾಡಿದ್ದಾರೆ.

ಭಕ್ತಿಗೀತೆಗಳು, ಭಾವಗೀತೆಗಳಿಗೆ ದನಿಯಾಗಿರುವ ಗೀತಾಭಾರತಿ ಅವರು ಲೈವ್ ಶೋ ಕೊಟ್ಟಿರುವುದಕ್ಕೆ ಲೆಕ್ಕವೇ ಇಲ್ಲ. ಇಂದು ಕಿರುತೆರೆ ಲೋಕದ ಗುಂಡಮ್ಮ ಆಗಿ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಗೀತಾ ಅವರು ನಟನೆಗೆ ಬರಲು ಸಂಗೀತವೇ ಕಾರಣ. ಉದಯ ಟಿವಿಯಲ್ಲಿ ಬರುತ್ತದ್ದ ಸಂಗೀತಾ ಕಾರ್ಯಕ್ರಮಕ್ಕಾಗಿ ಮಾಡಿರುವ ವಿಡಿಯೋ ದಿಂದಲೇ ನಟಿಸುವ ಅವಕಾಶ ದೊರೆತಿದ್ದಂತೆ.
ಗೀತಾ ದಪ್ಪಗಿರುವುದು ಯಾಕೆ? ಎಂಬ ವೀಕ್ಷಕನ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ಶಾಲಾ ದಿನಗಳಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದ ಗೀತಾ ಭಾರತಿ ಭಟ್ ಕರಾಟೆ ಕ್ರೀಡಾಪಟುವೂ ಹೌದು. ಕ್ರೀಡಾ ಚಟುವಟಿಕೆಯಲ್ಲಿ ಸದಾ ಕಾಲ ಮುಂದಿದ್ದ ಗೀತಾ ಭಾರತಿ ಅವರಿಗೆ ಕಾಲು ಆಪರೇಶನ್ ಮಾಡಿಸಿಕೊಳ್ಳುವ ಸಂದರ್ಭ ಬಂತು. ಕಾಲಿಗೆ ತಗುಲಿದ ಸೋಂಕಿನಿಂದ ಆಪರೇಶನ್ ಮಾಡಿಸಿಕೊಂಡ ಆಕೆ ರೆಸ್ಟ್ ನ ಸಮಯದಲ್ಲಿ ನಿಯಂತ್ರಣಕ್ಕೆ ಸಿಗದಂತೆ ದಪ್ಪವಾಗತೊಡಗಿದರು. ಮುಂದೆ ಜನ ರೇಗಿಸುವಷ್ಟು ದಪ್ಪಗಾದ ಆಕೆ ಮುಂದೆ ತಾನು ದಪ್ಪ ಎಂಬ ನೈಜತೆಯನ್ನು ಒಪ್ಪಿಕೊಂಡರು. ತದ ನಂತರ ಯಾರು ರೇಗಿಸುವಾಗಲೂ ಬೇಸರವಾಗಲಿಲ್ಲ ಎಂದು ಹೇಳುವ ಆಕೆ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಬ್ಯುಸಿಯಾಗಿದ್ದಾರೆ.