ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾರಮಣ' ಧಾರಾವಾಹಿಯಲ್ಲಿ ನಾಯಕ ರಮಣನಾಗಿ ನಟಿಸಿದ್ದ ಸ್ಕಂದ ಅಶೋಕ್ ತಂದೆಯಾಗುತ್ತಿರುವ ವಿಚಾರ ವೀಕ್ಷಕರಿಗೆಲ್ಲಾ ತಿಳಿದಿದೆ. ಎರಡು ತಿಂಗಳ ಹಿಂದಷ್ಟೇ ತಾವು ಗರ್ಭಿಣಿ ಎಂಬ ವಿಚಾರವನ್ನು ಇವರ ಪತ್ನಿ ಶಿಖಾ ಪ್ರಸಾದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಇದೀಗ ಮಡದಿಯ ಸೀಮಂತ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಸ್ಕಂದ ನೆರವೇರಿಸಿದ್ದು, ಸೀಮಂತದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾತ್ರವಲ್ಲ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಕಂದ ಅಶೋಕ್ ಮತ್ತು ಶಿಖಾ ಪ್ರಸಾದ್ ಮುದ್ದು ಕಂದನ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಅಂದ ಹಾಗೆ, ಸ್ಕಂದ ಅಶೋಕ್ ಮತ್ತು ಶಿಖಾ ಪ್ರಸಾದ್ ದಾಂಪತ್ಯ ಜೀವನಕ್ಕೆ ಎರಡರ ಹರೆಯ. 2018 ಮೇ ತಿಂಗಳಿನಲ್ಲಿ ಕಿರುತೆರೆಯ ಜೊತೆಗೆ ಹಿರಿತೆರೆ ನಟನಾಗಿ ಜನಪ್ರಿಯತೆ ಗಳಿಸಿರುವ ಸ್ಕಂದ ಅಶೋಕ್, ಫ್ಯಾಷನ್ ಡಿಸೈನರ್ ಆಗಿದ್ದ ಶಿಖಾ ಪ್ರಸಾದ್ ಅವರನ್ನು ವರಿಸಿದ್ದರು. ಅವರದು ಲವ್ ಕಮ್ ಆ್ಯರೆಂಜ್ಡ್ ಮ್ಯಾರೇಜ್ ಕೂಡಾ ಹೌದು.

ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಮುಂದೆ ಗುರು ಹಿರಿಯರ ಸಮ್ಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ತಿಂಗಳಷ್ಟೇ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದ ಜೋಡಿ ಇದೀಗ ಮುದ್ದು ಕಂದನ ನಿರೀಕ್ಷೆಯಲ್ಲಿದೆ.