ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿನು ಬಳಂಜ ನಿರ್ದೇಶನದ 'ನಿಹಾರಿಕಾ' ಧಾರಾವಾಹಿಯಲ್ಲಿ ನಾಯಕಿ ನಿಹಾರಿಕಾ ಆಗಿ ಕಾಣಿಸಿಕೊಳ್ಳುವ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಆಶಿಕಾ ಪಡುಕೋಣೆಯನ್ನು ಜನ ಗುರುತಿಸಿದ್ದು ತ್ರಿವೇಣಿಯಾಗಿ ನಟಿಸಿದ ನಂತರ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ನಾಯಕಿ ತ್ರಿವೇಣಿಯಾಗಿ ನಟಿಸುತ್ತಿದ್ದ ರಚನಾ ಅಪಘಾತದಿಂದ ಸಾವನ್ನಪ್ಪಿದಾಗ ಆ ಜಾಗಕ್ಕೆ ಬಂದವರೇ ಆಶಿಕಾ ಪಡುಕೋಣೆ. ತ್ರಿವೇಣಿಯಾಗಿ ಕಿರುತೆರೆ ಪ್ರಿಯರ ಮನ ಗೆದ್ದ ಆಶಿಕಾ ನಂತರ ಹಾರಿದ್ದು ತೆಲುಗು ಕಿರುತೆರೆಗೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥಲೋ ರಾಜಕುಮಾರಿ' ಧಾರಾವಾಹಿಯಲ್ಲಿ ನಾಯಕಿ ಅವನಿಯಾಗಿ ಅಭಿನಯಿಸಿದ್ದ ಆಶಿಕಾ ಪಡುಕೋಣೆ ಇದೀಗ ಅದೇ ಧಾರಾವಾಹಿಯ ಮೂಲಕ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಮರಳಿ ಬರಲಿದ್ದಾರೆ.
ತೆಲುಗಿನ 'ಕಥಲೋ ರಾಜಕುಮಾರಿ' ಕನ್ನಡಕ್ಕೆ ಡಬ್ ಆಗುತ್ತಿದ್ದು 'ಕಥೆಯ ರಾಜಕುಮಾರಿ' ಎಂಬ ಹೆಸರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ಆ ಧಾರಾವಾಹಿಯ ಮೂಲಕ ಆಶಿಕಾ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ. ಕನ್ನಡ, ತೆಲುಗಿನ ಜೊತೆಗೆ ತಮಿಳು ಕಿರುತೆರೆಯಲ್ಲೂ ಆಶಿಕಾ ಮಿಂಚಿದ್ದಾರೆ. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಸೆಲ್ವಿ' ಧಾರಾವಾಹಿಯಲ್ಲೂ ಈಕೆ ಬಣ್ಣ ಹಚ್ಚಿದ್ದಾರೆ. ತನ್ನ ಮನೋಜ್ಞ ಅಭಿನಯದ ಮೂಲಕ ತೆಲುಗು ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಆಶಿಕಾ, ಕಥೆಯ ರಾಜಕುಮಾರಿಯ ಅವನಿಯಾಗಿ ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬಂದಿರುವುದಕ್ಕೆ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ.