ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಸೂಪರ್ ಸೀಸನ್ನ ಗ್ರ್ಯಾಂಡ್ ಫಿನಾಲೆಯಲ್ಲಿ ಅರುಂಧತಿ ವಸಿಷ್ಠ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಎರಡನೇ ಸ್ಥಾನವನ್ನು ಅಖಿಲಾ ಪಜಿಮಣ್ಣು ಮತ್ತು ಮನೋಜವಂ ಪಡೆದಿದ್ದರೆ, ಮೂರನೇ ಸ್ಥಾನವನ್ನು ನಿತಿನ್ ಶಾಸ್ತ್ರಿ ಪಡೆದಿದ್ದಾರೆ.
ಕನ್ನಡ ಕೋಗಿಲೆ ಸೂಪರ್ ಸೀಸನ್ ಉತ್ತಮ ಸ್ಫರ್ಧಿಯಾಗಿ ಗುರುತಿಸಿಕೊಂಡಿರುವ ಅರುಂಧತಿ ಅವರು ಪ್ರತಿವಾರವೂ ಗೋಲ್ಡನ್ ಬಜರ್ ಪಡೆದುಕೊಂಡಿದ್ದರು. ಜನಪದ ಹಾಡು, ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳನ್ನು ಸುಮಧುರವಾಗಿ ಹಾಡುವ ಅರುಂಧತಿ ಅವರು ಶ್ರೀಪಾದ ಹೆಗಡೆ ಸೋಮನ ಮನೆ, ಶ್ರೀಪಾದ ಹೆಗಡೆ ಕಂಪ್ಲಿ, ಪಂಡಿತ್ ಕೈವಲ್ಯ ಕುಮಾರ ಅವರ ಸಂಗೀತ ಗರಡಿಯಲ್ಲಿ ಪಳಗಿದ್ದು,ಶ್ರೀಕಾಂತ್ ಕುಲಕರ್ಣಿ ಅವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡಿರುವ ಇವರು ಈಗಾಗಲೇ ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ.
ಇವರು ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿ ಜನಮನ ಸೆಳೆದಿದ್ದಾರೆ. ಅಲ್ಲದೇ ಕಥಕ್ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. ಮಂಡಲ ಆರ್ಟ್ಸ್, ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿರುವ ಅರುಂಧತಿ ಕನ್ನಡದಲ್ಲಿ ಗಜಲ್, ಚೀಸ್ ಬರೆದಿದ್ದಾರೆ. ಬಹುಮುಖ ಪ್ರತಿಭೆ ಅರುಂಧತಿ ಅವರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇವರಿಗೆ ಕರ್ನಾಟಕ ಸರ್ಕಾರದಿಂದ ಕೊಡ ಮಾಡುವ ಕಲಾರತ್ನ ಪ್ರಶಸ್ತಿ ದೊರಕಿದೆ.
ಒಟ್ಟಿನಲ್ಲಿ ಸಂಗೀತವಿಲ್ಲದೇ ನನ್ನ ಬದುಕಿಲ್ಲ ಎನ್ನುವ ಅರುಂಧತಿ ಕನ್ನಡ ಕೋಗಿಲೆ ಸೂಪರ್ ಸೀಸನ್ನಲ್ಲಿ ಸುಮಧುರ ಗಾಯನದ ಮೂಲಕ ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಿದ್ದಾರೆ.