ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆ ಹೊತ್ತು ಎಷ್ಟೋ ಮಂದಿ ಬೆಂಗಳೂರಿಗೆ ಬರುತ್ತಾರೆ. ಅದೇ ರೀತಿ ಶ್ರಮ ಪಟ್ಟು ಅವಕಾಶ ಪಡೆದು ಅದರಲ್ಲಿ ಯಶಸ್ವಿ ಕೂಡಾ ಆಗುತ್ತಾರೆ. ಅಂತವರ ಸಾಲಿನಲ್ಲಿ ಕಿರುತೆರೆ ನಟಿ ಅಕ್ಷತಾ ದಿವಟೆ ಕೂಡಾ ಒಬ್ಬರು.
ದಾವಣಗೆರೆಯಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುವ ಅಕ್ಷತಾ ದಿವಟೆ ನಂತರ ಉದ್ಯೋಗ ಅರಸಿ ಬಂದದ್ದು ಮಹಾನಗರಿ ಬೆಂಗಳೂರಿಗೆ. ಮಾಧ್ಯಮ ಲೋಕಕ್ಕೆ ಕಾಲಿಟ್ಟ ಆಕೆ ವರದಿಗಾರ್ತಿಯಾಗಿ ಕೆಲಸ ಆರಂಭಿಸಿದರು. ಬಯಸಿ ಬಂದ ಕ್ಷೇತ್ರದಲ್ಲೇ ಕೆಲಸ ದೊರೆತ ಕಾರಣ ಬಹಳ ಖುಷಿಯಲ್ಲಿದ್ದ ಅಕ್ಷತಾ ಅವರನ್ನು ಬಣ್ಣದ ಲೋಕ ಸೆಳೆಯಿತು. ಸಾಕಷ್ಟು ತಯಾರಿ ಮಾಡಿಕೊಂಡ ನಂತರ ನಟನಾ ಲೋಕಕ್ಕೂ ಕಾಲಿಟ್ಟರು ಅಕ್ಷತಾ.
ಅಕ್ಷತಾ ಮೊದಲು ಅಭಿನಯಿಸಿದ ಧಾರಾವಾಹಿ 'ಅಪರಂಜಿ'. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಪರಂಜಿ' ಧಾರಾವಾಹಿಯಲ್ಲಿ ನಾಯಕಿ ವಸುಧಾ ಗೆಳತಿ ನವ್ಯಾ ಆಗಿ ನಟನಾ ಪಯಣ ಆರಂಭಿಸಿದರು. ನಾಯಕಿಯ ಗೆಳತಿ ಪಾತ್ರವಾದರೂ ಪ್ರಾಮುಖ್ಯತೆ ಇರುವ ಪಾತ್ರ ಆದಾಗಿತ್ತು. ಮಾತ್ರವಲ್ಲ ಪ್ರತಿ ಎಪಿಸೋಡ್ನಲ್ಲೂ ಇವರು ಕಾಣಿಸಿಕೊಳ್ಳುತ್ತಿದ್ದರು. 'ಅಪರಂಜಿ' ಧಾರಾವಾಹಿ ನಂತರ ಕೆಲವು ದಿನಗಳ ಕಾಲ ಕಿರುತೆರೆಯಿಂದ ದೂರವಿದ್ದ ಅಕ್ಷತಾ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಮುಸ್ಸಂಜೆ ಮಹೇಶ್ ನಿರ್ದೇಶನದ 'ಕಸ್ತೂರಿ ನಿವಾಸ'ದ ಮೂಲಕ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕ ರಾಘವನ ಅತ್ತೆ ಸರ್ವಮಂಗಳ ಮಗಳು ಅಮೃತ ಆಗಿ ಅಕ್ಷತಾ ನಟಿಸುತ್ತಿದ್ದಾರೆ. ನಾಯಕ ರಾಘವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದರೆ ಇಡೀ ಆಸ್ತಿ ತನ್ನ ಪಾಲಾಗುತ್ತದೆ ಎಂಬ ಪ್ಲ್ಯಾನ್ ಸರ್ವಮಂಗಳಾಗೆ. ಇತ್ತ ಮಗಳು ಕೂಡಾ ಅಮ್ಮ ಹೇಳಿದಂತೆ ತಲೆ ಆಡಿಸುತ್ತಾಳೆ. ಆದರೆ ರಾಘವ್ ಮೃದುಲಾಳನ್ನು ಮದುವೆಯಾಗಿರುತ್ತಾನೆ. ಅದನ್ನು ಮನೆಯವರು ಯಾರೂ ಒಪ್ಪುವುದಿಲ್ಲ. ಅದರಲ್ಲೂ ಸರ್ವಮಂಗಳಾಗೆ ಆ ಜೋಡಿಯನ್ನು ಬೇರೆ ಮಾಡಿ ತನ್ನ ಮಗಳನ್ನೇ ಮನೆ ಸೊಸೆ ಮಾಡುವ ಬಯಕೆ.
ರಾಘವ್ನನ್ನು ಮದುವೆಯಾಗಬೇಕು ಎಂದುಕೊಂಡಿದ್ದ ಅಮೃತಾ ಇದೀಗ ಅವನ ಜೀವನದಿಂದ ದೂರವಾಗಬೇಕು, ಎಲ್ಲಾ ಸಮಸ್ಯೆ ಮುಗಿಯಬೇಕು ಎಂಬ ಉದ್ದೇಶದಿಂದ ವಿಷ ಕುಡಿಯುತ್ತಾಳೆ. ಆ ಮೂಲಕ ಅಮೃತಾ ಪಾತ್ರ ಮುಕ್ತಾಯವಾಗುತ್ತದೆ. ಧಾರಾವಾಹಿ ಕಥೆಯಲ್ಲಿ ಟ್ವಿಸ್ಟ್ ಕೊಡುವ ಕಾರಣ ಅಮೃತಾ ಪಾತ್ರವನ್ನು ಮುಗಿಸಲಾಗಿದೆ. ಈ ವಿಚಾರವನ್ನು ಸ್ವತಃ ಅಕ್ಷತಾ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'ಮಿಸ್ ಮಾಡದೆ ನನ್ನ ಅಭಿನಯದ ಕೊನೆಯ ಎಪಿಸೋಡ್ ನೋಡಿ' ಎಂದು ಬರೆದುಕೊಂಡಿದ್ದಾರೆ.