ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಅಮೃತ ಮತ್ತು ವರ್ಷ ಆಗಿ ದ್ವಿಪಾತ್ರದಲ್ಲಿ ಮಿಂಚಿದ್ದ ಹುಡುಗಿ ಹೆಸರು ಅಕ್ಷತ ದೇಶಪಾಂಡೆ. ಮೊದಲ ಧಾರಾವಾಹಿಯಲ್ಲೇ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಕ್ಷತ ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಬರುತ್ತಿದ್ದಾರೆ. ಮಧುಸೂದನ್ ನಿರ್ದೇಶನದ 'ಮತ್ತೆ ವಸಂತ' ಧಾರಾವಾಹಿಯಲ್ಲಿ ಅಪರ್ಣಾ ಆಗಿ ಅಕ್ಷತ ನಟಿಸುತ್ತಿದ್ದಾರೆ.
ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ವಿಶೇಷ ಒಲವು ಹೊಂದಿದ್ದ ಅಕ್ಷತ ನಾಟಕ, ಮಿಮಿಕ್ರಿ, ಹಾಡು ಹೀಗೆ ಎಲ್ಲದರಲ್ಲೂ ಮುಂದು. ಆಕಸ್ಮಿಕವಾಗಿ ಕಿರುತೆರೆಗೆ ಕಾಲಿಟ್ಟ ಅಕ್ಷತಾಗೆ ನಟನೆಯತ್ತ ವಿಶೇಷ ಒಲವು. ನಟನಾ ಕ್ಷೇತ್ರಕ್ಕೆ ಬರುವ ಸಲುವಾಗಿ ಒಂದಷ್ಟು ತಯಾರು ಮಾಡಿಕೊಂಡ ಅಕ್ಷತ ಮೊದಲು ಫೋಟೋಶೂಟ್ ಮಾಡಿಸಿದರು. ಆ ಪೋಟೋಗಳನ್ನು ಧಾರಾವಾಹಿ ತಂಡಕ್ಕೆ ನೀಡಿದ ಆಕೆ, ನಂತರ ಬೆಂಗಳೂರಿನಲ್ಲಿ ಎಲ್ಲಿ ಆಡಿಷನ್ ನಡೆದರೂ ಅಲ್ಲಿ ಹಾಜರಾಗುತ್ತಿದ್ದರು. ಅದೇ ರೀತಿ ಸ್ಟಾರ್ ಸುವರ್ಣ ವಾಹಿನಿಯ ಆಡಿಷನ್ಗೆ ಹೋದಾಗ ಅಕ್ಷತಾಗೆ ಆಶ್ಚರ್ಯ ಕಾದಿತ್ತು. ಅಷ್ಟು ದಿನ ಶ್ರಮ ಪಟ್ಟಿದ್ದಕ್ಕೂ ಸಾರ್ಥಕ ಎಂಬಂತೆ ಆ ಆಡಿಷನ್ನಲ್ಲಿ ಸೆಲೆಕ್ಟ್ ಆಗಿ ಬಿಟ್ಟರು. ಅದರೂ ಕೂಡಾ ಪ್ರಮುಖ ಪಾತ್ರಕ್ಕೆ.
'ಅಮೃತ ವರ್ಷಿಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಆಯ್ಕೆಯಾದ ಅಕ್ಷತ ಮೊದಲ ಧಾರಾವಾಹಿಯಲ್ಲೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ದ್ವಿಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮೊದಲ ಧಾರಾವಾಹಿ ಆದ ಕಾರಣ ಸಣ್ಣ ಪುಟ್ಟ ಪಾತ್ರ ಸಿಗಬಹುದು ಎಂದುಕೊಂಡಿದ್ದ ಅಕ್ಷತಾಗೆ ಪ್ರಮುಖ ಪಾತ್ರ ಸಿಕ್ಕಿದ್ದು ಬಹಳ ಖುಷಿ ತಂದಿತ್ತು. ಮನೋಜ್ಞವಾದ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದ ಅಕ್ಷತ, ಇದೀಗ 'ಮತ್ತೆ ವಸಂತ' ಧಾರಾವಾಹಿಯಲ್ಲಿ ಅಪರ್ಣಾ ಆಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ಮೊದಲ ಧಾರಾವಾಹಿಯಲ್ಲೇ ಮೋಡಿ ಮಾಡಿರುವ ಈಕೆ ಈ ಬಾರಿಯೂ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕು.