'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಪಾತ್ರಧಾರಿಯಾಗಿ ಬಣ್ಣದ ಪಯಣ ಆರಂಭಿಸಿದ ಕವಿತಾ ಗೌಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದದ್ದು 'ವಿದ್ಯಾ ವಿನಾಯಕ' ಧಾರಾವಾಹಿಯ ವಿದ್ಯಾ ಆಗಿ. ಇದರ ಜೊತೆಗೆ ಬೆಳ್ಳಿತೆರೆಯಲ್ಲಿ ನಟಿಸಿದ್ದರೂ ಆಕೆ ಇನ್ನೂ ಧಾರಾವಾಹಿ ಪ್ರಿಯರಿಗೆ ಚಿನ್ನು ಆಗೇ ಪರಿಚಯ.
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಮೊದಲ ಬಾರಿ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕವಿತಾ, 'ಪುನರ್ ವಿವಾಹ' ಧಾರಾವಾಹಿಗೆ ಆಯ್ಕೆ ಆಗಿದ್ದರೂ ನಟನೆಯ ರೀತಿ ನೀತಿಗಳು ತಿಳಿದಿಲ್ಲ ಎಂದು ರಿಜೆಕ್ಟ್ ಆದರು. ಮುಂದೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಗೆ ಆಯ್ಕೆ ಆದಾಗಲೂ ಅಭಿನಯಿಸಲು ಮುಂದೆ ಬರಲಿಲ್ಲ. ಕೊನೆಗೆ ಲಚ್ಚಿ ಆಗಿ ಬದಲಾದಾಗ ಇಡೀ 'ಲಕ್ಷ್ಮಿ ಬಾರಮ್ಮ' ತಂಡ ಕವಿತಾ ಅವರನ್ನು ಹುರಿದುಂಬಿಸಿತು. ಈ ಧಾರಾವಾಹಿ ನಂತರ ಕವಿತಾ ತಮಿಳು ಧಾರಾವಾಹಿಯಲ್ಲೂ ಅಭಿನಯಿಸಿದರು. ಬಿಗ್ಬಾಸ್ ಮನೆಗೆ ಹೋದ ಕವಿತಾ ನಂತರ ತಕಧಿಮಿತ ಡ್ಯಾನ್ಸ್ ಶೋ ಮೂಲಕ ಕೂಡಾ ಮನೆಮಾತಾದರು. ಕವಿತಾ ಭರತನಾಟ್ಯ ಕಲಾವಿದೆ ಕೂಡಾ.
ಇದೆಲ್ಲದರ ಜೊತೆಗೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದ ಪರ್ಪಲ್ ಪ್ರಿಯ ಆಗಿ ಬೆಳ್ಳಿತೆರೆಗೂ ಕಾಲಿಟ್ಟ ಕವಿತಾ ಇದೀಗ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಕವಿತಾ ಗೃಹಿಣಿಯಾಗಿ ನಟಿಸಿದ್ದು, ಕವಿತಾ ಅಭಿಮಾನಿಗಳು ಖುಷ್ ಆಗಿದ್ದಾರೆ.