ಇಂದು ಕಿರುತೆರೆ ಬರೀ ನಟನೆ ಕಲಿತವರಿಗೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದಿನ ತಲೆಮಾರುಗಳಿಗೆ ಹೋಲಿಸಿದ್ರೆ ರಂಗಭೂಮಿಯಿಂದ ಬಂದ ಕಲಾವಿದರೇ ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ರಂಗಾಯಣ, ನೀನಾಸಂನಲ್ಲಿ ಅಭಿನಯ ತರಬೇತಿ ಪಡೆದ ಬಳಿಕವೇ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಆದರೆ, ಇಂದು ಹಾಗಲ್ಲ, ಬೇರೆ ಬೇರೆ ವೃತ್ತಿಯಲ್ಲಿದ್ದವರು ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಇದರ ಜೊತೆಗೆ ಇಂಜಿನಿಯರಿಂಗ್, ಬಿಎ, ಬಿಕಾಂ ಪದವಿ, ಸ್ನಾತಕೋತ್ತರ ಪದವಿ ಕಲಿತವರು ಕೂಡಾ ಇಂದು ನಟನೆಗೆ ಇಳಿಯುತ್ತಿದ್ದಾರೆ. ಅಂದ ಹಾಗೇ ಇಂಜಿನಿಯರಿಂಗ್ ಮಾಡಿ ಬಣ್ಣದ ಲೋಕದಲ್ಲಿ ಅದರಲ್ಲೂ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವವರ ಬಗ್ಗೆ ತಿಳಿಯೋಣ.
ಸುಪ್ರೀತಾ ಸತ್ಯನಾರಾಯಣ್ : ಸೀತಾ ವಲ್ಲಭದ ಮೈಥಿಲಿಯಾಗಿ ಗಮನಸೆಳೆದಿರುವ ಸುಪ್ರೀತಾ ಮೂಲತಃ ಮೈಸೂರಿನವರು. ಇಂಜಿನಿಯರಿಂಗ್ ಪದವಿ ಪಡೆದ ಇವರು ಬಳಿಕ ನಟನೆಯತ್ತ ಚಿತ್ತ ಹರಿಸಿದರು. ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿರುವ ಇವರು ರಹದಾರಿ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ.
ಚಂದನ್ ಕುಮಾರ್ : ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಚಂದನ್ ಮುಖ ಮಾಡಿದ್ದು ಟಿವಿ ಲೋಕದತ್ತ. ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ರಾಧಾ ಕಲ್ಯಾಣ, ಲಕ್ಷ್ಮಿಬಾರಮ್ಮ, ಸರ್ವಮಂಗಲ ಮಾಂಗಲ್ಯೇ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತೆಲುಗಿನ ಸಾವಿತ್ರಗಮ್ಮಾಯಿ ಅಬ್ಬಾಯಿ ಸೀರಿಯಲ್ನಲ್ಲು ನಟಿಸುತ್ತಿದ್ದಾರೆ.ಶ್ವೇತ ಪ್ರಸಾದ್ : ಶಿವಮೊಗ್ಗದ ಬೆಡಗಿ ಶ್ವೇತಾ ಓದಿದ್ದು ಆರ್ಕಿಟೆಕ್ಟ್ ಆದರೂ ಇಳಿದಿದ್ದು ಅಭಿನಯಕ್ಕೆ! ಶೃತಿ ನಾಯ್ಡು ಅವರ ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಈಕೆ ರಾಧಾರಮಣದಲ್ಲಿ ರಮಣನ ಮುದ್ದಿನ ಮಡದಿ ಆರಾಧಾನಾಳಾಗಿ ನಟಿಸುವ ಮೂಲಕ ಮನೆ ಮಾತಾದರು. ಕಳ್ಬೆಟ್ಟದ ದರೋಡೆಕೋರರು ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟ ಈಕೆ ಆರ್‌ಜೆ ಪ್ರದೀಪರ ಪತ್ನಿ. ಸ್ವಾಮಿನಾಥನ್ ಅನಂತರಾಮನ್: ಮಿಥುನರಾಶಿ ಧಾರಾವಾಹಿಯಲ್ಲಿನ ನಾಯಕ ಮಿಥುನ್ ಪಾತ್ರಧಾರಿ ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಬಣ್ಣದ ಲೋಕದತ್ತ ವಿಶೇಷ ಆಸಕ್ತಿ ಹೊಂದಿದ್ದ ಇವರು ಮುಖ ಮಾಡಿದ್ದು ಕಿರುತೆರೆಯತ್ತ. ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿದ್ದಾರೆ ಸ್ವಾಮಿನಾಥನ್. ಭೂಮಿ ಶೆಟ್ಟಿ: ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಕುಂದಾಪುರದ ಕುವರಿ ಕಿರುತೆರೆ ವೀಕ್ಷಕರ ಪಾಲಿನ ಪ್ರೀತಿಯ ಮಣಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರಾವಾಹಿಯಲ್ಲಿ ಮಣಿಯಾಗಿ ಗಮನ ಸೆಳೆದ ಈಕೆ ಬಿಗ್ ವಾಸ್ ಸೀಸನ್ 7ರ ಸ್ಪರ್ಧಿಯಾಗಿಯೂ ಮನೆ ಮಾತಾಗಿದ್ದಾರೆ. ಶರಣ್ಯಾ ಶೆಟ್ಟಿ: ಇಂಜಿನಿಯರಿಂಗ್ ಓದಿರುವ ಇವರು ಮಲೆನಾಡಿನ ಕುವರಿ ಶರಣ್ಯಾ ಶೆಟ್ಟಿ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದ ಮೂಲಕ ಮನರಂಜನೆ ನೀಡುತ್ತಿದ್ದಾರೆ.ಆರ್ಯನ್ ರಾಜ್ : ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರು ಆಸಕ್ತಿ ತೋರಿದ್ದು ಅಭಿನಯದತ್ತ. ಹರಹರ ಮಹಾದೇವ ಧಾರಾವಾಹಿಯಲ್ಲಿ ವಿಷ್ಣುವಾಗಿ ನಟಿಸಿದ್ದ ಇವರಿಗೆ ಹೆಸರು ತಂದು ಕೊಟ್ಟಿದ್ದು ಮಾದೇವನ ಪಾತ್ರ. ಉಘೇ ಉಘೇ ಮಾದೇಶ್ವರ ಧಾರಾವಾಹಿಯ ಮಾದೇವನಾಗಿ ಕಿರುತೆರೆಯಲ್ಲಿ ಗಮನ ಸೆಳೆದಿದ್ದಾರೆ ಆರ್ಯನ್ ರಾಜ್.ಕಾರ್ತಿಕ್ ಜಯರಾಮ್: ಕಿರುತೆರೆಯಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಇವರು ಸಿವಿಲ್ ಇಂಜಿನಿಯರಿಂಗ್ ಓದಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ನ ಜಯಕೃಷ್ಣ ಆಗಿ ಕಿರುತೆರೆ ಲೋಕಕ್ಕೆ ಬಂದ ಜೆಕೆ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದಾರೆ. ನಾಗಿಣಿ 2ರಲ್ಲಿ ಆದಿಶೇಷನಾಗಿ ನಟಿಸಿದ್ದ ಕಾರ್ತಿಕ್ ಹಿಂದಿಯ ಸಿಯಾ ಕಿ ರಾಮ್ನಲ್ಲೂ ರಾವಣನಾಗಿ ಮಿಂಚಿದ್ದಾರೆ.