ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಶಿವನ ಪಾತ್ರಧಾರಿಯಾಗಿ ನಟಿಸುತ್ತಿದ್ದ ನಟವಿನಯ್ ಗೌಡ ಈ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಕಾರಣ ಸದ್ಯ ಶಿವನ ಪಾತ್ರಕ್ಕೆ ವಿದಾಯ ಹೇಳಿರುವುದಾಗಿ ವಿನಯ್ ಗೌಡ ಹೇಳಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ.. ಮೊದಲನೇಯದಾಗಿ ನಾನು ನಿಮೆಲ್ಲರ ಬಳಿ ಕ್ಷಮೆ ಕೇಳುತ್ತೇನೆ. ಯಾಕೆಂದರೆ ನನಗೆ ತುಂಬ ಹತ್ತಿರವಾಗಿರುವ, ನಿಮಗೂ ಇಷ್ಟವಾಗಿರುವ ಮಹಾದೇವನ ಪಾತ್ರವನ್ನು ಮಾಡಲಾಗುತ್ತಿಲ್ಲ. ಈಗ ಇರುವ ದುಃಖದ ಸ್ಥಿತಿಯಲ್ಲಿ, ಕಷ್ಟದ ಸ್ಥಿತಿಯಲ್ಲಿ ನಾನು ಶಿವನ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನಮ್ಮ ಇಂಡಸ್ಟ್ರಿಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಮಾಸ್ಕ್ ಹಾಕಿಕೊಂಡು ಪಾತ್ರ ಮಾಡುವುದಕ್ಕೆ ಆಗುವುದಿಲ್ಲ. ಮೇಕಪ್ ಕಲಾವಿದ ಮೇಕಪ್ ಮಾಡದೆ ನಮಗೆ ನಟಿಸಲು ಸಾಧ್ಯವಿಲ್ಲ. ಸಹ ಕಲಾವಿದರ ಜೊತೆ ಮಾತನಾಡದೆ ನಾನು ನಟಿಸಲು ಕಷ್ಟ. ಇವರೆಲ್ಲರ ಆರೋಗ್ಯ, ನನ್ನ ಹಾಗೂ ಮನೆಯವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ವಿನಯ್ ಗೌಡ ಹೇಳಿದ್ದಾರೆ.
ಆದಷ್ಟು ಶೀಘ್ರದಲ್ಲಿ ಹೊಸ ಕಥೆ, ಹೊಸ ಪಾತ್ರದ ಮೂಲಕ ನಾನು ಮತ್ತೆ ನಿಮ್ಮ ಮುಂದೆ ಬರುತ್ತೇನೆ. ಅಲ್ಲಿಯ ತನಕ ನಿಮ್ಮ ಪ್ರೀತಿ-ವಿಶ್ವಾಸ ಹೀಗೆಯೇ ಇರಲಿ. ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ. ದಯಮಾಡಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ. ಸುರಕ್ಷತೆಯಿಂದ ಮನೆಯಲ್ಲಿ ಇರಿ ಎಂದು ವಿನಯ್ ಗೌಡ ಮನವಿ ಮಾಡಿದ್ದಾರೆ.