ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ 'ಗುರು ಶಿಷ್ಯರು' ಸಿನಿಮಾ ತಂಡ ಹೊಸ ಸುದ್ದಿಯೊಂದನ್ನ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಹೆಸರಾಂತ ಹಿರಿಯ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಅಭಿನಯಿಸುತ್ತಿದ್ದಾರೆ.
'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿವಾದಿಯಾಗಿ ಸುರೇಶ್ ಹೆಬ್ಳೀಕರ್ ಕಾಣಿಸಿಕೊಳ್ಳಲಿದ್ದಾರೆ. ಗಾಂಧಿ ಜಯಂತಿ ಸಂದರ್ಭದಲ್ಲಿ ಗುರು ಶಿಷ್ಯರು ಚಿತ್ರತಂಡ ಈ ಪೋಸ್ಟರ್ ಅನ್ನು ರಿವೀಲ್ ಮಾಡಿದೆ.
ಗಾಂಧಿವಾದಿಯಾದ ಪರಿಸರವಾದಿ
ಮಹಾತ್ಮ ಗಾಂಧಿ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತೆಗೆದುಕೊಂಡು ಬದುಕುವ ಪಾತ್ರ ಕೂಡ ಇದಾಗಿದೆ. ಗಾಂಧೀಜಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ತೋರಿಸಲಾಗಿದೆ.
ತರುಣ್ ಕಿಶೋರ್ ಹೇಳುವುದು ಹೀಗೆ..
ಈ ಪಾತ್ರದ ಕುರಿತು ಗುರುಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯುಸರ್ ತರುಣ್ ಕಿಶೋರ್ ಹೇಳುವುದು ಹೀಗೆ.. 'ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ'.
ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂತದ್ದಾಗಿದೆ. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.
ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದಾರೆ. ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ಜಂಟಲ್‌ಮನ್ ಸಿನಿಮಾ ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವಿಸ್ ಬ್ಯಾನರ್ನಲ್ಲಿ ಗುರುಶಿಷ್ಯರು ಚಿತ್ರ ತಯಾರಾಗಿದೆ. ಈಗಾಗಲೇ ಶೇ. 80ರಷ್ಟು ಸಿನಿಮಾದ ಶೂಟಿಂಗ್ ಮುಗಿದಿದೆ. ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಂಡಿದೆ.