ಡ್ರಾಮ, ಲೂಸಿಯಾ, ಕ್ವಾಟ್ಲೆ ಸತೀಶ, ಅಯೋಗ್ಯ ಅಂತಂಹ ಸಿನಿಮಾಗಳನ್ನ ಮಾಡಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರೋ ನಟ ಸತೀಶ್ ನೀನಾಸಂ. ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳಿಂದ, ವಿಭಿನ್ನ ಸಿನಿಮಾಗಳನ್ನ ಮಾಡುತ್ತಾ, ನಟನಾಗಿ, ನಿರ್ಮಾಪಕನಾಗಿ ಕನ್ನಡ ಸಿನಿಮಾ ಪ್ರೇಕ್ಷಕರ ಹೃದಯ ಕದ್ದಿರುವ ಸತೀಶ್ ನೀನಾಸಂ ಸಾಮಾನ್ಯವಾಗಿ ಖಾಸಗಿ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ತೀರಾ ಕಮ್ಮಿ.
ಕುಟುಂಬದ ಖಾಸಗಿತನಕ್ಕೆ ನೀಡಬೇಕಾದ ಗೌರವವನ್ನು ಅವರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಸುಪ್ರಿತಾ ಅವರನ್ನು ಮದುವೆ ಆಗಿರುವ ನಟ ಸತೀಶ್ ನೀನಾಸಂ ಅವರಿಗೆ ಮನಸ್ವಿತ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಇದೇ ಮೊದಲ ಬಾರಿಗೆ ಮನಸ್ವಿತ ಅವರ ಮೊದಲ ಫೋಟೊವನ್ನುಸತೀಶ್ ಹಂಚಿಕೊಂಡಿದ್ದಾರೆ.
'ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು ಮನಸ್ವಿತ. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ'.
ಈಗ ಪುತ್ರಿಗೆ ಆರು ವರ್ಷ. ಆದರೆ, ಮಗಳ ಖಾಸಗಿ ಬದುಕಿಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಒಂದು ವರ್ಷವಿದ್ದಾಗ ತೆಗೆದ ಫೋಟೊವನ್ನು ಶೇರ್ ಮಾಡಿದ್ದಾರೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. ಧನ್ಯವಾದಗಳೊಂದಿಗೆ ಸುಪ್ರಿತಾ, ಮನಸ್ವಿತ, ಸತೀಶ್ ಎಂದು ಬರೆದುಕೊಂಡಿದ್ದಾರೆ.
ಸತೀಶ್ ನೀನಾಸಂ ಸತೀಶ್ ತಾಯಿ ಕಡೆ ಸಂಬಂಧಿಯಾಗಿರುವ ಸುಪ್ರಿತಾ ಅವರನ್ನ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ, ತಮ್ಮ ಕುಟುಂಬದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರಲಿಲ್ಲ. ಇದೀಗ ಮಗಳ ಹೆಸರಿನೊಂದಿಗೆ ಫೋಟೋವನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸದ್ಯ ಮನಸ್ವಿತ 6 ವರ್ಷದವಳಾಗಿದ್ದು, ಶಾಲೆಗೆ ಹೋಗ್ತಾ ಅಪ್ಪ ಅಮ್ಮನ ಜೊತೆ ಸಂತೋಷವಾಗಿದ್ದಾಳೆ ಎಂದು ಸತೀಶ್ ನೀನಾಸಂ ತಿಳಿಸಿದ್ದಾರೆ.
ಇದನ್ನೂ ಓದಿ: ಡಬ್ಬಿಂಗ್ ಮನೆಯಲ್ಲಿ ಪೆಟ್ರೋಮ್ಯಾಕ್ಸ್ ಜಪ ಮಾಡುತ್ತಿರುವ ನೀನಾಸಂ ಸತೀಶ್