ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿಯ ನಾಯಕ ಚಿರಂತ್ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಗೆದ್ದ ಪವನ್ ರವೀಂದ್ರ ಸಣ್ಣ ಬ್ರೇಕ್ನ ನಂತರ ಮತ್ತೊಮ್ಮೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕಾವ್ಯಾಂಜಲಿ-2 ರಲ್ಲಿ ನಾಯಕರಾಗಿ ಪವನ್ ರವೀಂದ್ರ ನಟಿಸಲಿದ್ದಾರೆ. ಆ ಮೂಲಕ ಮತ್ತೆ ಕಿರುತೆರೆ ಪ್ರಿಯರನ್ನು ರಂಜಿಸಲು ಮರಳಿ ಬರುತ್ತಿದ್ದಾರೆ ಈ ಚಾಕಲೇಟ್ ಹೀರೋ. ರಂಗನಾಯಕಿಯ ಚಿರಂತ್ ಆಗಿ ಜನಪ್ರಿಯವಾಗಿರುವ ಇವರ ನಿಜವಾದ ಹೆಸರು ಪವನ್ ರವೀಂದ್ರ ಎಂದು ಹಲವರಿಗೆ ತಿಳಿದಿಲ್ಲ.
![pavan ravindra](https://etvbharatimages.akamaized.net/etvbharat/prod-images/kn-bng-03-pavanravindra-serial-photo-ka10018_23062020104132_2306f_1592889092_889.jpg)
ಎಲ್ಲಾ ಕಡೆ ಚಿರಂತ್ ಆಗಿ ಮನೆ ಮಾತಾಗಿರುವ ಪವನ್ ಅವರ ನಟನಾ ಲೋಕಕ್ಕೆ ಮುನ್ನುಡಿ ಬರೆದದ್ದು ವಿನು ಬಳಂಜ. ವಿನು ಬಳಂಜ ನಿರ್ದೇಶನದ ಜಾನಕಿ ರಾಘವ ಧಾರಾವಾಹಿಯಲ್ಲಿ ರಾಘವನಾಗಿ ನಟನಾ ಜಗತ್ತಿಗೆ ಬಂದ ಪವನ್ ಮುಂದೆ ಕಸ್ತೂರಿ ವಾಹಿನಿಯ ಏಟು ಎದಿರೇಟು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.
![pavan ravindra](https://etvbharatimages.akamaized.net/etvbharat/prod-images/kn-bng-03-pavanravindra-serial-photo-ka10018_23062020104132_2306f_1592889092_163.jpg)
ತದ ನಂತರ ರಂಗನಾಯಕಿಯ ಚಿರಂತ್ ಆಗಿ ಅಭಿನಯಿಸಿದ್ದ ಪವನ್ ಆ ಧಾರಾವಾಹಿಯಲ್ಲೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದು ಎಲ್ಲರಿಗೂ ತಿಳಿದೇ ಇದೆ. ರಂಗನಾಯಕಿ ಧಾರಾವಾಹಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದು ನಿಮ್ಮ ನೆಚ್ಚಿನ ಚಿರಂತ್ ಆಲಿಯಾಸ್ ಪವನ್ ರವೀಂದ್ರ ಇನ್ನು ಮುಂದೆ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ.
"ನಟನೆ ಎಂದರೆ ಏನೂ, ನಟಿಸಲು ಬೇಕಾಗಿರುವಂತಹ ರೀತಿ ನೀತಿಗಳು ಏನು ಎಂಬುದರ ಬಗ್ಗೆ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ. ಕಿರುತೆರೆಗೆ ಬಂದ ಮೇಲೆ ನಟನೆಯ ರೀತಿ ನೀತಿಗಳು ಕರಗತವಾಯಿತು. ಮಾತ್ರವಲ್ಲ ಎಲ್ಲವನ್ನು ಕಲಿತುಗೊಂಡೆ" ಎಂದು ಸಂತಸದಿಂದ ಹೇಳುವ ಪವನ್ ಅವರಿಗೆ ಕಿರುತೆರೆ ಜೊತೆಗೆ ಹಿರಿತೆರೆಯಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿದೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪವನ್ ಇನ್ನು ಹಿರಿತೆರೆಯತ್ತ ಮುಖ ಮಾಡಿಲ್ಲ.
![pavan ravindra](https://etvbharatimages.akamaized.net/etvbharat/prod-images/kn-bng-03-pavanravindra-serial-photo-ka10018_23062020104132_2306f_1592889092_595.jpg)