ದೇವತೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಕಿರಣ್ ರಾಜ್ ಕಿನ್ನರಿ ಧಾರಾವಾಹಿಯ ನಕುಲ್ ಆಗಿ ನಟಿಸಿದ್ದರು. ನಂತರ ಕಿರುತೆರೆಯಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಅವರು 'ಕನ್ನಡತಿ'ಯ ಹರ್ಷ ಆಗಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮಾತ್ರವಲ್ಲ ಆ ಸೆಕೆಂಡ್ ಇನ್ನಿಂಗ್ಸ್ ಕಿರಣ್ ರಾಜ್ ಅವರಿಗೆ ಭರ್ಜರಿ ಯಶಸ್ಸನ್ನು ತಂದು ಕೊಟ್ಟಿದೆ.
ಹೌದು, ಕನ್ನಡತಿಯ ಹರ್ಷ ಆಗಿ ಕಿರಣ್ ರಾಜ್ ಬದಲಾದಾಗಲೇ ಲಕ್ ಖುಲಾಯಿಸಿದ್ದು, ಕಿರುತೆರೆ ವೀಕ್ಷಕರು ಅವರ ನಟನೆಗೆ ಫಿದಾ ಆಗಿದ್ದಾರೆ. ಮಾತ್ರವಲ್ಲ, ಹ್ಯಾಂಡ್ಸಮ್ ಲುಕ್ ನಿಂದ ಹೆಣ್ಮಕ್ಕಳ ಮನ ಕದ್ದಿರುವ ಕಿರಣ್ ರಾಜ್ ಇದೀಗ ಕಿರುತೆರೆಯಲ್ಲಿ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.
ಅಸತೋಮಾ ಸದ್ಗಮಯ, ಮಾರ್ಚ್ 22 ಸಿನಿಮಾದಲ್ಲಿ ಅಭಿನಯಿಸಿದ ನಂತರ ಸಿನಿ ರಂಗದಿಂದ ದೂರವಿದ್ದ ಕಿರಣ್ ರಾಜ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹದ್ದೂರ್ ಗಂಡು, ಬಡ್ಡೀಸ್, ಚತುಷ್ಪಥ, ವಿಕ್ರಮ್ ಗೌಡ ಸಿನಿಮಾಗಳಲ್ಲಿ ಕಿರಣ್ ರಾಜ್ ಬಣ್ಣ ಹಚ್ಚಲಿದ್ದಾರೆ. ಇದರ ಜೊತೆಗೆ ತೆಲುಗಿನ 'ನುವ್ವೆ ನಾ ಪ್ರಾಣಂ' ಸಿನಿಮಾ ಸೇರಿದಂತೆ ಎಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯಲ್ಲಿಯೂ ನಟನಾ ಕಂಪು ಪಸರಿಸಲು ತಯಾರಾಗಿದ್ದಾರೆ.
ದೇವತೆ ಧಾರಾವಾಹಿಯ ನಂತರ ಗುಂಡ್ಯಾನ ಹೆಂಡ್ತಿ, ಚಂದ್ರಮುಖಿ, ಕಿನ್ನರಿಯಂತಹ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಇವರು ಬಣ್ಣ ಹಚ್ಚಿದ್ದರೂ ಕಿರುತೆರೆಯಲ್ಲಿ ಇವರಿಗೆ ಜನಪ್ರಿಯತೆ ದೊರಕಿದ್ದು ಕನ್ನಡತಿಯ ಧಾರಾವಾಹಿಯ ಹರ್ಷ ಪಾತ್ರ. ಇದೀಗ ಅದರ ಜೊತೆಗೆ ಹಿರಿತೆರೆಯಲ್ಲಿಯೂ ಕಾಲಿಟ್ಟು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಕಿರಣ್ ರಾಜ್.