ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕ ಸೂಪರ್ ಸ್ಟಾರ್ ಜಯಕೃಷ್ಣ ಆಲಿಯಾಸ್ ಜೆಕೆ ಆಗಿ ಅಭಿನಯಿಸಿದ್ದ ಜಯರಾಮ್ ಕಾರ್ತಿಕ್ ಬಣ್ಣದ ಲೋಕದಲ್ಲಿಯೂ ಜೆಕೆಯಾಗಿಯೇ ಫೇಮಸ್. ಅಶ್ವಿನಿ ನಕ್ಷತ್ರ ನಂತರ ಬೆಳ್ಳಿತೆರೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದ ಜೆಕೆ ನಾಗಿಣಿ- 2 ಧಾರಾವಾಹಿಯಲ್ಲಿ ಅತಿಥಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ನಾಗರಾಜ ಆದಿಶೇಷನಾಗಿ ನಟಿಸಿದ ಜೆಕೆ ಇದೀಗ ಮತ್ತೆ ಕಿರು ತೆರೆಗೆ ಮರಳಿದ್ದಾರೆ. ಅದು ರಾವಣನಾಗಿ..
ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ನಟ ಜೆಕೆ ರಾವಣನಾಗಿ ಅಬ್ಬರಿಸಿ ಪರಭಾಷೆಯ ಕಿರುತೆರೆಯಲ್ಲೂ ಮನೆ ಮಾತಾಗಿದ್ದರು. ಇದೀಗ ಅದೇ ಸಿಯಾ ಕೆ ರಾಮ್ ಕನ್ನಡಕ್ಕೆ ಡಬ್ ಆಗಿದ್ದು, ಸೀತೆಯ ರಾಮ ಹೆಸರಿನಲ್ಲಿ ಪ್ರಸಾರ ಕಾಣುತ್ತಿದೆ. ನಿಖಿಲ್ ಸಿನ್ಹಾ ಹಾಗೂ ಧರ್ಮೇಶ್ ಶಾ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಧಾರಾವಾಹಿಯಲ್ಲಿ ಜೆಕೆ ರಾವಣನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಾವು ನಟಿಸಿರುವ ಹಿಂದಿ ಧಾರಾವಾಹಿಯೊಂದು ಕನ್ನಡ ಭಾಷೆಗೆ ಡಬ್ ಆಗುತ್ತಿರುವುದು ನೋಡಿ ಜಯರಾಮ್ ಅವರಿಗೆ ಖುಷಿ ಆಗಿದೆ.
ಸೀತೆಯ ರಾಮ ಧಾರಾವಾಹಿಯಲ್ಲಿ ರಾವಣನಾಗಿ ನಾನು ನಿಮ್ಮ ಮುಂದೆ ಬರುತ್ತಿದ್ದೇನೆ. ಅಂದ ಹಾಗೇ ನಾನು ರಾವಣನಾಗಿ ಕಾಣಿಸಿಕೊಳ್ಳುವ ಮೊದಲು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ರಾವಣನ ಪಾತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದಕ್ಕಾಗಿ ನಾನು ಅನೇಕ ಪುಸ್ತಕಗಳನ್ನು ಓದಿದೆ. ಯಾವುದೇ ಪಾತ್ರಕ್ಕೆ ಜೀವ ತುಂಬುವ ಮೊದಲು ಅದರ ಆಳದ ಬಗ್ಗೆ ತಿಳಿದಿರಬೇಕು. ಅದೇ ಕಾರಣದಿಂದ ಪುಸ್ತಕ ಓದುವುದು ನನಗೆ ಇಷ್ಟ ಇಲ್ಲದಿದ್ದರೂ ಅನಿವಾರ್ಯವಾಗಿ ಓದಬೇಕಾಯಿತು. ಧಾರಾವಾಹಿಯಲ್ಲಿ ನಿರರ್ಗಳವಾಗಿ ನಟಿಸಬೇಕೆಂದರೆ ಭಾಷೆಯ ಮೇಲೆ ಹಿಡಿತವಿರಬೇಕಾದುದು ಮುಖ್ಯ. ಒಟ್ಟಿನಲ್ಲಿ ಇದು ಒಂದು ಉತ್ತಮ ಅನುಭವ ಎಂದು ಹೇಳುತ್ತಾರೆ ಜೆಕೆ.
ಸೀತೆಯ ರಾಮ ಧಾರಾವಾಹಿಯಲ್ಲಿ ಶಿವನಾಗಿ ಅಭಿನಯಿಸಿ ಮನೆ ಮಾತಾಗಿರುವ ಜೆಕೆ ಶಿವನ ಪಾತ್ರಕ್ಕಾಗಿ ಬರೋಬ್ಬರಿ ಮೂರು ತಿಂಗಳು ತಯಾರಿ ನಡೆಸಿದ್ದಾರೆ. ಜೊತೆಗೆ ಶಿವ ತಾಂಡವ ನೃತ್ಯವನ್ನು ಕೂಡಾ ಜಯರಾಂ ಅವರು ಕಲಿತಿದ್ದರು. ಇದರ ಜೊತೆಗೆ ಬಹಳ ಮುಖ್ಯವಾದ ವಿಚಾರವೆಂದರೆ ತೂಕ ಹೆಚ್ಚು ಮಾಡಿದುದು. "ರಾವಣನನ್ನು ಸಿಕ್ಸ್ ಪ್ಯಾಕ್ ನಲ್ಲಿ ತೋರಿಸುವುದು ನಿರ್ದೇಶಕರ ಉದ್ದೇಶವಾಗಿತ್ತು. ಅದೇ ಕಾರಣದಿಂದ 80 ಇದ್ದ ನಾನು ಮೂರು ತಿಂಗಳು ಕಾಲ ಕಷ್ಟ ಪಟ್ಟ ಬಳಿಕ ನನ್ನ ತೂಕವನ್ನು 96 ಕೆಜಿಗೆ ಏರಿಸಿದ್ದೆ. ಇದರ ಜೊತೆಗೆ ರಾವಣನ ಕಾಸ್ಟ್ಯೂಮ್ ಧರಿಸಿ ನಟಿಸುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಕಿರೀಟ, ಆಭರಣ ಎಲ್ಲಾ ಸೇರಿದಾಗ ಸುಮಾರು 30 ಕೆಜಿಯಷ್ಟು ಭಾರ ಹೊರ ಬೇಕಾಗುತ್ತದೆ. ಆದರೆ ಇಷ್ಟದ ಪಾತ್ರವಾದ ಕಾರಣ ತುಂಬಾ ಕಷ್ಟ ಎನಿಸಲಿಲ್ಲ" ಎನ್ನುತ್ತಾರೆ ಜಯರಾಂ ಕಾರ್ತಿಕ್.
ರಾವಣನ ಪಾತ್ರಕ್ಕಾಗಿ ನಿರ್ದೇಶಕ ನಿಖಿಲ್ ಸಿನ್ಹಾ ಬರೋಬ್ಬರಿ 4 ಸಾವಿರ ಜನರ ಆಡಿಶನ್ ಮಾಡಿದ್ದರು. ಜೊತೆಗೆ ಜೆಕೆ ಅವರಿಗೂ ಸ್ಕ್ರೀನ್ ಟೆಸ್ಟ್ ಕಳಿಸಿಕೊಡುವಂತೆ ಕೇಳಿದರು. ಆಗ ಜೆಕೆ ನಿಜವಾಗಿ ಶೂಟಿಂಗ್ ಮಾಡಿ ಕಳಿಸಿದರು. ಮುಂದೆ ಓಕೆ ಆಗಿ ಧಾರಾವಾಹಿಗೆ ಆಯ್ಕೆ ಆದರು ಜೆಕೆ. ಪರಭಾಷೆಯಲ್ಲಿ ರಾವಣನಾಗಿ ಅಬ್ಬರಿಸಿದ ಜೆಕೆಗೆ ಇದ್ದುದು ಒಂದೇ ಬೇಸರ. ತನ್ನ ಅಭಿನಯದ ಸೀತೆಯ ರಾಮ ಧಾರಾವಾಹಿಯನ್ನು ಕನ್ನಡಿಗರು ನೋಡಲಿಲ್ಲ ಎಂಬ ಬೇಸರವಿತ್ತು. ಇದೀಗ ಸೀತೆಯ ರಾಮ ಧಾರಾವಾಹಿಯ ಮೂಲಕ ಪ್ರೇಕ್ಷಕರು ತನ್ನನ್ನು ನೋಡಬಹುದು ಎಂಬ ಖುಷಿ ಜಯರಾಮ್ ಅವರಿಗಿದೆ.