ಭಾನುವಾರದ ಸಂಚಿಕೆಯಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದ ಹೆಸರಾಂತ ಹಾಸ್ಯ ನಟ ಚಿಕ್ಕಣ್ಣ, ತಮ್ಮ ತಂದೆ ಬೈರೇಗೌಡರನ್ನು ನೆನದು ಕಣ್ಣೀರಿನ ಕೋಡಿ ಹರಿಸಿದರು. ಬಾಲ್ಯದಲ್ಲಿ ಅಪ್ಪನಿಂದ ತಿಂದ ಏಟುಗಳನ್ನು ಮೆಲುಕು ಹಾಕಿದ ಅವರು, ಅಪಘಾತದಿಂದ ಆಸ್ಪತ್ರೆಗೆ ಸೇರಿದ ಅಪ್ಪನನ್ನು ಉಳಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೆ ಅವರನ್ನು ಕಳೆದುಕೊಂಡಾಗಾದ ಆದ ದುಃಖವನ್ನು ನೆನೆದ ಚಿಕ್ಕಣ್ಣ ಅವರಿಗೆ ತಮ್ಮ ಕಣ್ಣುಗಳಿಂದ ಸುರಿಯುತ್ತಿದ್ದ ನೀರುಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ.
ಅವರಮ್ಮ, ಸಹೋದರಿಯರು ಗಾರೆ ಕೆಲಸ ಮಾಡಿ ಜೀವನ ಸಾಗಿಸಿದ್ದನ್ನು ನೆನಪಿಸಿಕೊಂಡು ಮಾತಾಡುವ ವೇಳೆ ಚಿಕ್ಕಣ್ಣನ ಗಂಟಲು ಬಿಗಿದುಕೊಂಡಿತ್ತು. ಮಾತುಗಳು ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಅಪ್ಪನಿಗೆ ಬೆಂಗಳೂರು ತೋರಿಸೋ ವಿಚಾರಕ್ಕೆ ನಾನು ಮನಸ್ಸು ಮಾಡಲೇ ಇಲ್ಲ. ಅವರು ನನ್ನ ಜೀವನದಲ್ಲಿ ದುಡ್ಡು ಇದ್ದಾಗ ಇಹಲೋಕ ತ್ಯಜಿಸಿ ಹೋಗೆ ಬಿಟ್ಟರು. ನನ್ನ ಅಪ್ಪನಿಗೆ ಇಲ್ಲಿ ಕರೆತಂದು ನೋಡಿಕೊಳ್ಳುವ ಆಸೆ ಕೈಗೂಡಲೇ ಇಲ್ಲವೆಂದು ತಮ್ಮ ಟಿ ಷರ್ಟ್ ಅಂಚಿನಿಂದ ಕಣ್ಣು ಒರೆಸಿಕೊಂಡರು. ಸಾಧಕರ ಕುರ್ಚಿಯಲ್ಲಿ ಕುಳಿತಿದ್ದ ಚಿಕ್ಕಣ್ಣ ಅತ್ತರೆ, ಎದುರಿಗೆ ಅವರ ತಾಯಿ, ಸಹೋದರಿಯರು ಸೀರೆಯ ಅಂಚಿನಿಂದ ಕಣ್ಣು ಒರೆಸಿಕೊಂಡಿದ್ದು ಕಂಡುಬಂತು.
ಎಲ್ಲರನ್ನು ನಗಿಸುವವರ ಜೀವನದಲ್ಲಿ ನಗಲಾರದಷ್ಟು ದುಃಖವಿರುತ್ತೆ. ಹಾಸ್ಯನಟ ಚಿಕ್ಕಣ್ಣ ಅವರ ಜೀವನ ಸಹ ಹಾಗೇ ಇದೆ ಅನ್ನೋದು ಅವರು ವೀಕೆಂಡ್ ಟೆಂಟ್ಗೆ ಬಂದಾಗ ಗೊತ್ತಾಗಿದೆ.