ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿ ಪ್ರಸಾರ ನಿಲ್ಲಿಸಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ರಂಗನಾಯಕಿ ಧಾರಾವಾಹಿ ಎಂದ ಕೂಡಲೇ ನೆನಪಾಗುವುದು ವಿಭಾ ಪಾತ್ರ. ಹೌದು, ರಂಗನಾಯಕಿ ಧಾರಾವಾಹಿಯಲ್ಲಿ ವಿಲನ್ ವಿಭಾಳಾಗಿ ಮೋಡಿ ಮಾಡುತ್ತಿದ್ದ ಚೆಂದುಳ್ಳಿ ಚೆಲುವೆ ಅನುಶ್ರೀ ಜನಾರ್ಧನ್ ಅವರ ಅಂದ ಚೆಂದಕ್ಕೆ ಮರುಳಾದವರು ಅದೆಷ್ಟೋ ಮಂದಿ.
ರಂಗನಾಯಕಿಯಲ್ಲಿ ಖಡಕ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನುಶ್ರೀ , ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ನೋರು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ ಹಾಕುವ ಫೋಟೋಗಳನ್ನು ನೋಡಿದರೆ ಪಡ್ಡೆ ಹುಡುಗರ ದಿಲ್ಗೆ ಗಾಯವಾಗುವುದಂತೂ ಗ್ಯಾರಂಟಿ.
ದಂತದ ಗೊಂಬೆಯಂತಿರುವ ಅನುಶ್ರೀ ಜನಾರ್ಧನ್ ಇಂದು ಕಿರುತೆರೆ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಡ್ಯಾನ್ಸ್. ಯಾಕೆಂದರೆ ಸಣ್ಣ ಪ್ರಾಯದಿಂದಲೂ ಆಕೆಗಿದ್ದ ಕನಸು ಕೂಡಾ ಅದೊಂದೇ. ಮೂರು ಹೊತ್ತು ಡ್ಯಾನ್ಸ್ನ ಕುರಿತು ಜಪ ಮಾಡುತ್ತಿದ್ದ ಅನುಶ್ರೀಯ ಡ್ಯಾನ್ಸ್ ನೋಡಿದ ಸ್ನೇಹಿತರು ಧಾರಾವಾಹಿ ಆಡಿಶನ್ ನಡಿತಿದೆ. ಟ್ರೈ ಮಾಡಿ ನೋಡು ಎಂದರು.
ಅದರಲ್ಲೇನಿದೆ ಎಂದು ಟ್ರೈ ಮಾಡಿದ ಅನುಶ್ರೀ ಅವರನ್ನು ಬಣ್ಣದ ಲೋಕ ಸ್ವಾಗತಿಸಿತು. ಮಹಾಕಾಳಿ ಧಾರಾವಾಹಿ ಮೂಲಕ ನಟನಾ ಯಾನಕ್ಕೆ ಮುನ್ನುಡಿ ಬರೆಸಿಕೊಂಡ ಸಕ್ಕರೆ ನಾಡಿನ ಬೆಡಗಿ ಮುಂದೆ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಶ್ರೀ ವಿಷ್ಣು ದಶಾವತಾರದಲ್ಲಿ ಅಭಿನಯಿಸಿರುವ ಈಕೆಗೆ ಹೆಸರು ತಂದು ಕೊಟ್ಟಿದ್ದು ರಂಗನಾಯಕಿಯ ವಿಭಾ ಪಾತ್ರ. ಧಾರಾವಾಹಿ ಪ್ರಸಾರ ಮುಗಿದಿದ್ದರೂ ಜನ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಮತ್ತೊಮ್ಮೆ ಬರಲಿ ಎಂದು ಆಶಿಸುತ್ತಿದ್ದಾರೆ.