ಚಂಬಲ್ ದಕ್ಷ ಐಎಎಸ್ ಅಧಿಕಾರಿಯ ಜೀವನಾಧಾರಿತ ಚಿತ್ರ ಅನ್ನೋ ಗುಮಾನಿ ಇತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಸಿನಿಮಾ ರಿಲೀಸ್ ಆಗುವ ಮೂಲಕ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಜೀವನಕ್ಕೂ ಈ ಚಿತ್ರಕಥೆಗೆ ಸಾಕಷ್ಟು ಸಾಮ್ಯತೆಯಿದೆ. ರವಿ ಅವರ ಜೀವನದಿಂದಲೇ ಸಾಕಷ್ಟು ಮಾಹಿತಿ ತೆಗೆದು ಮಾಡಿದ ಕಥೆಗೆ, ಕಾಲ್ಪನಿಕತೆಯ ಸ್ಪರ್ಶ ನೀಡಿ ನಿರ್ದೇಶಕ ಜೇಕಬ್ ವರ್ಗೀಸ್ ಸುಂದರವಾಗಿ ತೆರೆ ಮೇಲೆ ತಂದಿದ್ದಾರೆ.
ಭ್ರಷ್ಟರಿಗೆ ಸಿಂಹ ಸ್ವಪ್ನ ಆಗಿದ್ದ ಜಿಲ್ಲಾಧಿಕಾರಿ ಡಿಕೆ ರವಿ ಅವರ ಅಂತ್ಯ ಹೇಗೆ ಆತ್ಮಹತ್ಯೆ ಎಂದು ಸಾಬೀತಾಯಿತು. ಹಾಗೆ ಚಂಬಲ್ ಸಿನಿಮಾದಲ್ಲೂ ನಾಯಕ ಸುಭಾಷ್ ಅಂತ್ಯ ಆತ್ಮಹತ್ಯೆ ಎಂದು ಬಿಂಬಿಸಿ, ಸಂಪೂರ್ಣ ಕೇಸ್ ಮುಚ್ಚಿ ಹಾಕುವುದಕ್ಕೆ ಯಾವ ಮಟ್ಟದ ಷಡ್ಯಂತ್ರ ರೂಪಿಸಲಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಐಎಎಸ್ ಅಧಿಕಾರಿ ಸುಭಾಷ್ (ನಟ ನೀನಾಸಂ ಸತೀಶ್ ) ಕೋಲಾರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಸೆದೆಬಡಿದು ಬಹಳ ಬೇಗ ರಾಜಕೀಯ ವ್ಯಕ್ತಿಗಳ ದ್ವೇಷ ಕಟ್ಟಿಕೊಳ್ಳುತ್ತಾನೆ. ಪರಿಣಾಮ ಅಧಿಕಾರಿಯನ್ನು ಬೆಂಗಳೂರಿಗೆ ರಾಜ್ಯ ತೆರಿಗೆ ಇಲಾಖೆಗೆ ವರ್ಗ ಮಾಡಲಾಗುವುದು. ಅಲ್ಲಿ ಮತ್ತೆ ಸುಭಾಷ್ ಅನೇಕ ಭೂ ಹಾಗೂ ಕಟ್ಟಡ ಮಾಲೀಕರಿಗೆ ನೀರು ಕುಡಿಸುತ್ತಾನೆ. ಅವನು ನಡೆಸುವ ರೈಡ್ಗಳು ದೊಡ್ಡ ಮಟ್ಟದಲ್ಲಿ ಅವ್ಯವಹಾರವನ್ನು ಬಯಲಿಗೆ ತರುವ ಸೂಚನೆ ನೀಡುತ್ತವೆ. ಇದೇ ವೇಳೆ ಸುಭಾಷ್ ತನ್ನ ಮನೆಯಲ್ಲಿ ಬಚ್ಚಿಟ್ಟ ಅಮೂಲ್ಯ ಫೈಲ್ಗಳನ್ನು ಅಪಹರಿಸಿ ಅವನನ್ನು ಅವನ ಮನೆಯಲ್ಲೇ ಕೊಂದು, ಆತ್ಮಹತ್ಯೆ ಎನ್ನುವ ರೀತಿಯಲ್ಲಿ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತದೆ. ನಿಷ್ಠಾವಂತ ಅಧಿಕಾರಿಯ ಸಾವು ಸಮಾಜದಲ್ಲಿ ಗಲಭೆಗೆ ಕಾರಣವಾಗುತ್ತೆ. ಮಂತ್ರಿಗಳು, ರಾಜಕಾರಣಿಗಳು,ಬಿಲ್ಡರ್ ಲಾಭಿ ಈ ಪ್ರಕರಣದಲ್ಲಿ ಹೇಗೆ ಜಯಸಾಧಿಸುತ್ತೆ ಅನ್ನೋದು ಚಿತ್ರಕಥೆಯ ತಿರುಳು.
ದಕ್ಷ ಅಧಿಕಾರಿಯ ಪಾತ್ರದಲ್ಲಿ ನೀನಾಸಂ ಸತೀಶ್ ಅದ್ಭುತವಾಗಿ ನಟಿಸಿದ್ದಾರೆ. ಐಎಎಸ್ ಅಧಿಕಾರಿ ತೋರುವ ಜಾಣ್ಮೆ, ಶ್ರದ್ಧೆ, ಚುರುಕುತನ, ಧೈರ್ಯ ಇಷ್ಟವಾಗುತ್ತದೆ. ಇವರ ಪತ್ನಿ ಪಾತ್ರಕ್ಕೆ ಸೋನು ಗೌಡ ನ್ಯಾಯ ಒದಗಿಸಿದ್ದಾರೆ. ಸುಭಾಷ್ ತಾಯಿ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸಿದ್ದಾರೆ.
ಸರ್ದಾರ್ ಸತ್ಯ ಹಂತಕನಾಗಿ, ಪವನ್ ಕುಮಾರ್ ಹ್ಯಾಕರ್ ಆಗಿ, ಅಚ್ಯುತ್ ಕುಮಾರ್ ಐಎಸ್ಅಧಿಕಾರಿ ಮುಗಿಸುವ ಷಡ್ಯಂತ್ರದ ರೂವಾರಿ ಆಗಿ, ರೋಜರ್ ನಾರಾಯಣ್ ಅವರ ಸ್ಟೈಲ್ ಇಷ್ಟವಾಗುತ್ತದೆ.