ಆರ್. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ‘ಐ ಲವ್ ಯು‘ ಸಿನಿಮಾ ಇಂದು ಕನ್ನಡ, ತೆಲುಗು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಈ ಸಿನಿಮಾದಲ್ಲಿ ಕೂಡಾ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಉಪೇಂದ್ರ ಹೇಳಿದರೂ ಇದು ಅವರ ಇತರ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಕಾಲೇಜು ವಿದ್ಯಾರ್ಥಿನಿ ಧಾರ್ಮಿಕ ( ರಚಿತಾ ರಾಮ್) ಪ್ರೀತಿಯ ಬಗ್ಗೆ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆಯಲು ನಿರ್ಧರಿಸುತ್ತಾಳೆ. ಈ ವ್ಯಾಸಂಗದ ಬಗ್ಗೆ ತಿಳಿಯಲು ಸಂತೋಷ್ ನಾರಾಯಣ್ (ಉಪೇಂದ್ರ) ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಅವನ ಬಳಿ ಬಂದು ತನ್ನ ವ್ಯಾಸಂಗದ ವಿಚಾರವಾಗಿ ತಿಳಿಸುತ್ತಾಳೆ. ಪ್ರೀತಿಯನ್ನು ಪ್ರಾಕ್ಟಿಕಲ್ ಆಗಿ ತೋರಿಸುತ್ತೇನೆ ಎಂದು ಸಂತೋಷ್ ಹೇಳುತ್ತಾನೆ. ಆದರೆ ಧಾರ್ಮಿಕ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾಳೆ. ಕೆಲವು ದಿನಗಳ ನಂತರ ಇಬ್ಬರ ನಡುವೆ ಜಗಳ ನಡೆದು ಧಾರ್ಮಿಕ ಬೇರೆ ಸ್ಥಳಕ್ಕೆ ಹೊರಡುತ್ತಾಳೆ. ಆಗ ಸಂತೋಷ್ ಆಕೆಯ ಹಿಂದೆ ಹೋಗಿ ನಿಜವಾದ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಧಾರ್ಮಿಕ ಆತನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ.
![i love you](https://etvbharatimages.akamaized.net/etvbharat/prod-images/i-love-you-upendra-and-rachita-ram1560500774194-25_1406email_1560500785_104.jpg)
ಕೆಲವು ದಿನಗಳ ನಂತರ ಸಂತೋಷ್ ಹಳ್ಳಿ ಹುಡುಗಿ ಗೌರಿ (ಸೋನುಗೌಡ)ಯನ್ನು ಮದುವೆಯಾಗಿ ಹೆಣ್ಣು ಮಗುವಿಗೆ ತಂದೆಯಾಗುತ್ತಾನೆ. ಜೊತೆಗೆ ಆಗರ್ಭ ಶ್ರೀಮಂತನಾಗುತ್ತಾನೆ. ಆದರೆ 10 ವರ್ಷಗಳಾದರೂ ಆತ ಧಾರ್ಮಿಕಳನ್ನು ಮಾತ್ರ ಮರೆಯುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಧಾರ್ಮಿಕ ಸಂತೋಷ್ಗೆ ಫೋನ್ ಮಾಡಿ ಆತನನ್ನು ಭೇಟಿಯಾಗಲು ಬಯಸುತ್ತಾಳೆ. ಇದರಿಂದ ಖುಷಿಯಾದ ಸಂತೋಷ್, ಆಕೆಗಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ಖರೀದಿಸಿ ಆಕೆ ಹೇಳಿದ ಜಾಗಕ್ಕೆ ಹೊರಡುತ್ತಾನೆ. ಆತ ಧಾರ್ಮಿಕಳನ್ನು ಭೇಟಿ ಮಾಡುತ್ತಾನೆಯೇ... ಆತನ ಪತ್ನಿ ಗೌರಿಗೆ ಈ ವಿಷಯ ತಿಳಿಯುವುದೇ.. ಆ ಉಂಗುರ ಯಾರ ಪಾಲಾಗುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಬಹಳ ದಿನಗಳ ನಂತರ ಉಪ್ಪಿಯನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ರಚಿತಾ ರಾಮ್ ಹಾಡೊಂದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸೋನುಗೌಡ ಚಿತ್ರಕ್ಕೆ ಟ್ವಿಸ್ಟ್ ನೀಡುತ್ತಾರೆ. ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಅನೇಕರು ಹೇಳುವುದೂ ಉಂಟು. ಪಿ.ಡಿ.ಸತೀಶ್ ಅವರ ಕಾಮಿಡಿ ಟೈಮಿಂಗ್ ಸಖತ್ ಮಜಾ ಕೊಡುತ್ತದೆ. ಡಾ. ಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಬರುವ ಮೂರು ಹಾಡುಗಳು ಮೆಲೋಡಿ ಆಗಿವೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಕೂಡಾ ಚೆನ್ನಾಗಿದೆ. ಸುಜ್ಞಾನ್ ತಮ್ಮ ಛಾಯಾಗ್ರಹಣದಲ್ಲಿ ಯಾವ ಕೊರತೆ ಇಲ್ಲದ ಹಾಗೆ ನೋಡಿಕೊಂಡಿದ್ದಾರೆ. ಪ್ರೀತಿ ಕಾಡುವುದು ಸಹಜ. ಆದರೆ ವಿವಾಹ ಬಂಧನ ಕಡೆಯವರೆಗೂ ಕರೆದೊಯ್ಯುವುದು ಎಂಬ ಸಂದೇಶವನ್ನೂ ಆರ್.ಚಂದ್ರು ಚಿತ್ರದಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ‘ಐ ಲವ್ ಯು’ ಕೊಟ್ಟ ಕಾಸಿಗೆ ತೃಪ್ತಿ ನೀಡುವ ಸಿನಿಮಾ ಎನ್ನಬಹುದು.