ಬೆಂಗಳೂರು: 2021ನೇ ವರ್ಷ ಮುಗಿಯುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಡಿಸೆಂಬರ್ ತಿಂಗಳಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತವೆ. ಕ್ರೇಜಿ ಸ್ಟಾರ್ ರವಿಚಂದ್ರನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ 'ಕನ್ನಡಿಗ' ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಆದರೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ ಬದಲಾಗಿ ಡಿಸೆಂಬರ್ 17 ರಂದು ಜೀ ಸಿನಿಮಾದ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ನಟಿ ರಮೇಶ್ ಅರವಿಂದ್ ಕನ್ನಡಿಗ ಸಿನಿಮಾದ ಟ್ರೈಲರ್ ಅನಾವರಣ ಮಾಡಿದ್ದಾರೆ. ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜಟ್ಟ, ಮೈತ್ರಿ ಚಿತ್ರಗಳನ್ನ ನಿರ್ದೇಶಿಸಿದ್ದ ಬಿ.ಎಂ.ಗಿರಿರಾಜ್ ನಿರ್ದೇಶನ ಮಾಡಿದ್ದಾರೆ. ರಾಕ್ಲೈನ್ ವೆಂಕಟೇಶ್, ಪಾವನಾ ಗೌಡ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಭವಾನಿ ಪ್ರಕಾಶ್, ಜೀವಿಕ, ಜಮ್ಮಿ ಅಲ್ಟರ್, ಶೃಂಗ, ಮೈತ್ರಿ ಜಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಶಬ್ದಕೋಶವನ್ನ ಬರೆದವನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಕನ್ನಡಿಗನಿಗಿದೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನ ರವಿಚಂದ್ರನ್ ಸಿನಿಮಾ ಕೆರಿಯರ್‌ನಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ. ಇದರ ಜೊತೆಗೆ ದೊಡ್ಡ ಪರದ ಮೇಲೆ ರವಿಚಂದ್ರನ್ ನೋಡಿ ಖುಷಿ ಪಡುತ್ತಿದ್ದ ಕ್ರೇಜಿಸ್ಟಾರ್ ಅಭಿಮಾನಿಗಳು ಒಟಿಟಿಯಲ್ಲಿ ತಮ್ಮ ನೆಚ್ಚಿನ ನಟನನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ವೈರಲ್ ಫೀವರ್: ತಮಿಳುನಾಡಿನ ಖ್ಯಾತ ನಟ ಸಿಂಬು ಆಸ್ಪತ್ರೆಗೆ ದಾಖಲು