ಬೆಂಗಳೂರು: ಕೊರೊನಾದಿಂದ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೆ, ಸಾಕಷ್ಟು ಜನ ಈ ಹೆಮ್ಮಾರಿಗೆ ಪ್ರಾಣ ಬಿಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕನ್ನಡ ಚಿತ್ರೋದ್ಯಮದ, ಕೆಲ ಉತ್ಸಾಹಿ ಯುವಕರ ತಂಡ 'ಉಸಿರು' ಎಂಬ ಹೆಸರು ಇಟ್ಟುಕೊಂಡು, ಜನರ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ತತಕ್ಷಣ ಪೂರೈಕೆ ಮಾಡಲಾಗುತ್ತಿದೆ. ಇದೀಗ ಆ ಕಾರ್ಯಕ್ಕೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಕೈ ಜೋಡಿಸಿದ್ದಾರಂತೆ.
ಓದಿ: ಶಾಲಾ-ಕಾಲೇಜು ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಕೊಡಿಸಿ: ಸಿಎಂಗೆ ಪತ್ರ ಬರೆದ ಕಿರಣ್ ರಾಜ್
ಸದ್ಯ ಮೈಸೂರಿನಲ್ಲಿರುವ ದರ್ಶನ್, ಸಿನಿಮಾ ಮಂದಿಯೇ ಸೇರಿ ಮಾಡುತ್ತಿರುವ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಉಸಿರು ತಂಡದವರು ಮಾಡುವ ಕೆಲಸವನ್ನು ದರ್ಶನ್ ಅವರಿಗೂ ವಿವರಿಸಿದ್ದಾರೆ. ಸದ್ಯ ಮೈಸೂರಿನಲ್ಲಿರುವ ದರ್ಶನ್, ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಿ ಉಸಿರು ತಂಡಕ್ಕೆ ಸಾಥ್ ನೀಡಲಿದ್ದಾರೆ.
ಅಂದಹಾಗೆ ಈಗ ಮೈಸೂರಿನಲ್ಲಿ ಒಬ್ಬ ರೋಗಿಗೆ ಉಸಿರು ತಂಡದಿಂದ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಹತ್ತು ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಿ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಸಿ, ಗಂಭೀರ ಸಮಸ್ಯೆಯಲ್ಲಿರುವ ರೋಗಿಗಳ ಮನೆಗೇ ಅದನ್ನು ತಲುಪಿಸಿ ತುರ್ತು ಆರೈಕೆ ನೀಡುವ ಕೆಲಸವನ್ನು ಈ ತಂಡ ಮಾಡುತ್ತಿದೆ. ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ ಉಸಿರು ಕೆಲಸ ಮಾಡುತ್ತಿದೆ. 50ಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿರುವ ಈ ತಂಡ, ಸ್ಯಾಚುರೇಷನ್ ಪ್ರಮಾಣ ಕಡಿಮೆ ಇರುವವರಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಸದ್ಯ ಈ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಕೈ ಜೋಡಿಸಿದ್ದಾರೆ.
ಈ ತಂಡದಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಚಿತ್ರಸಾಹಿತಿ ಕವಿರಾಜ್, ನಟಿಯರಾದ ನೀತು ಶೆಟ್ಟಿ, ಅಕ್ಷತಾ ಎಂ, ನಟ ಸಂಚಾರಿ ವಿಜಯ್, ಸಂಗೀತ ನಿರ್ದೇಶಕ ಡಾ. ಕಿರಣ್ ತೊಟಂಬೈಲ್, ನಿರ್ದೇಶಕರಾದ ಕವಿತಾ ಲಂಕೇಶ್, ಕೆ.ಎಂ. ಚೈತನ್ಯ, ಸಾಧುಕೋಕಿಲ, ವಿನಯ್ ಪಾಂಡವಪುರ, ಶಕ್ತಿ ಎಂ, ಪವನ್ ಮುಂತಾದವರಿದ್ದಾರೆ.