ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತೊ ಇಲ್ವೋ ಗೊತ್ತಿಲ್ಲ. ಆದ್ರೆ ಸಿನಿಮಾಗಳ ಟೈಟಲ್ ಮಾತ್ರ ಸೌಂಡ್ ಮಾಡುತ್ತವೆ. ಇದೀಗ ಗಾಂಧಿನಗರದಲ್ಲಿ ಸವರ್ಣದೀರ್ಘ ಸಂಧಿ ಸಿನಿಮಾ ಹಲವಾರು ವಿಷಯಗಳಿಗೆ ಗಮನ ಸೆಳೆಯುತ್ತಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಸದ್ದು ಮಾಡ್ತಿರೋ ಸವರ್ಣದೀರ್ಘ ಸಂಧಿ ಸಿನಿಮಾ ಆಡಿಯೋವನ್ನ ವಿಕಟ ಕವಿ ಯೋಗರಾಜ್ ಭಟ್ ಹಾಗೂ ಮೆಲೋಡಿ ಹಾಡುಗಳ ಸಾಹಿತಿ ಜಯಂತ್ ಕಾಯ್ಕಿಣಿ ಚಿತ್ರತಂಡದ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಯೋಗರಾಜ್ ಭಟ್, ಈ ಚಿತ್ರದ ಹಾಡುಗಳು ಹಾಗೂ ನಿರ್ದೇಶಕ ಕಮ್ ನಟ ವೀರೇಂದ್ರ ಶೆಟ್ಟಿಗೆ ಇರುವ ಕನ್ನಡದ ವ್ಯಾಮೋಹದ ಬಗ್ಗೆ ಕೊಂಡಾಡಿದ್ರು. ಹಾಗೇ ಹಲವು ದಿನಗಳ ನಂತ್ರ ಜಯಂತ್ ಕಾಯ್ಕಿಣಿ ಮತ್ತು ಮನೋಮೂರ್ತಿ ಜೊತೆ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು ಹೆಮ್ಮೆ ಅಂತಾ ಯೋಗರಾಜ್ ಭಟ್ ಹೇಳಿದ್ರು. ಚಾಲಿ ಪೊಲೀಲು ಎಂಬ ತುಳು ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ವೀರೇಂದ್ರ ಶೆಟ್ಟಿ ಈ ಸಿನಿಮಾವನ್ನ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ.
ವೀರೇಂದ್ರ ಶೆಟ್ಟಿ ಜೋಡಿಯಾಗಿ ಕೃಷ್ಣಾ ಎಂಬ ಯುವ ನಟಿ ಜೊತೆಯಾಗಿದ್ದಾರೆ. ಪತ್ರಕರ್ತ ಅಜಿತ್ ಹನುಮಕ್ಕನವರ್ ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈ ಚಿತ್ರ ರೌಡಿಸಂ ಕಾಮಿಡಿ ಜಾನರ್ ಸಿನಿಮಾ. ಕಥಾ ನಾಯಕ ರೌಡಿ. ಈ ರೌಡಿಗೂ ವ್ಯಾಕರಣಕ್ಕೂ ಏನು ಸಂಬಂಧ ಅನ್ನೋದು ಚಿತ್ರದ ಸ್ಟೋರಿ ಲೈನ್. ಸಿನಿಮಾವನ್ನು ವೀರೇಂದ್ರ ಶೆಟ್ಟಿ, ಮನೋಮೂರ್ತಿ, ಲುಷಿಗ್ಟಂನ್ ಥಾಮಸ್, ಹೇಮಂತ್ ಕುಮಾರ್ ಸೇರಿ ನಿರ್ಮಾಣ ಮಾಡಿದ್ದಾರೆ. ಆನೇಕಲ್, ಮೂಡಿಗೆರೆ, ದೇವರಾಯನದುರ್ಗ, ಜಿಗಣಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಸಿನಿಮಾ ಇದೇ ತಿಂಗಳ 18ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.