ಭಟ್ಟರ ‘ವಿಕ್ಟರಿ 2’ ಚಿತ್ರದ ಹಾಡಿನ ಸಾಲು 'ನಾವ್ ಮನೆಗ್ ಹೋಗೋದಿಲ್ಲ....ಈಗ ನಾವ್ ವಿದೇಶಕ್ ಹೋಗೋದಿಲ್ಲ' ಎಂಬಂತಾಗಿದೆ.
ವಿದೇಶಕ್ಕೆ ಬ್ರೇಕ್ ಹಾಕಿರುವ ಭಟ್ಟರು ಈಗ ಸ್ವದೇಶದಲ್ಲಿ ಹಾಡುಗಳ ಶೂಟಿಂಗ್ ಎನ್ನುತ್ತಿದ್ದಾರೆ. ಈ ಮೊದಲು ಯುರೋಪಿನ ಪೋಲೆಂಡ್, ಜಾರ್ಜಿಯ ದೇಶಗಳಿಗೆ ತೆರಳಿ ಚಿತ್ರೀಕರಣ ಮಾಡಬೇಕು ಎಂದು ಭಟ್ಟರು ತೀರ್ಮಾನಿಸಿದ್ದರು. ಈಗ 'ಗಾಳಿಪಟ 2' ಅರ್ಧ ಚಿತ್ರೀಕರಣ ಮುಗಿಸಿಕೊಂಡ ಚಿತ್ರತಂಡ ಲಾಕ್ಡೌನ್ ಸಡಿಲಿಕೆಗಾಗಿ ಕಾಯುತ್ತಿದ್ದಾರೆ. ಈಗ ವಿದೇಶದ ಬದಲು ಸ್ವದೇಶದಲ್ಲಿ ಹಿಮಾಚಲ ಪ್ರದೇಶ ಸುತ್ತ ಚಿತ್ರೀಕರಣ ಮಾಡಲು ಲೋಕೇಷನ್ ನಿರ್ಧರಿಸಿದ್ದಾರೆ. ಹಿಮಾಚಲ ಪ್ರದೇಶ ನಮ್ಮ ಚಿತ್ರದ ಕತೆಗೂ ಸಹ ಹೊಂದಾಣಿಕೆ ಆಗುತ್ತದೆ ಎಂದು ಹೇಳುತ್ತಾರೆ.
ಎಂ ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ‘ಗಾಳಿಪಟ 2’ ಬಹುಕೋಟಿ ವೆಚ್ಚದ, ಬಹು ತಾರಗಣ ಹೊಂದಿದ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಲೂಸಿಯ ಪವನ್ ಕುಮಾರ್ ಇಲ್ಲಿ ಜೊತೆಯಾಗಿದ್ದಾರೆ. ಗಾಳಿಪಟ 10 ವರ್ಷಗಳ ಹಿಂದೆ ಬಿಡುಗಡೆ ಆದಾಗ ಪವನ್ ಕುಮಾರ್ ಸ್ಥಾನವನ್ನು ಅಂದು ರಾಜೇಶ್ ಕೃಷ್ಣನ್ ತುಂಬಿದ್ದರು. ಈ ಗಾಳಿಪಟ 2 ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಹಾಗೂ ನಿಶ್ವಿಕ ನಾಯ್ಡು ಅಭಿನಯಿಸುತ್ತಿದ್ದಾರೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರ ಸೂರಜ್ ಪ್ರೊಡಕ್ಷನ್ ಅಡಿ ನಿರ್ಮಾಣ ಆಗುತ್ತಿದೆ. ಚಿತ್ರೀಕರಣ ಆದ ಭಾಗಗಳಿಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ನಡೆಯುತ್ತಿದೆ.