ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಕ್ಟೋಬರ್ 30 ರಂದು ತಮ್ಮ ಪುತ್ರ ಯಥರ್ವ್ ಯಶ್ ಮೊದಲ ವರ್ಷದ ಹುಟ್ಟುಹಬ್ಬದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ ಯಶ್ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಹೇಗೆ ಹಾಗೂ ಎಲ್ಲಿ ಆಚರಿಸಿದರು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ಈ ಪ್ರಶ್ನೆಗೆ ಈಗ ಉತ್ತರ ದೊರೆತಿದೆ.
ಗೋವಾದಲ್ಲಿ ಯಶ್, ತಮ್ಮ ಮಗನ ಮೊದಲ ವರ್ಷದ ಬರ್ತ್ಡೇಯನ್ನು ಆಚರಿಸಿದ್ದಾರೆ. ಅದೂ ಕೂಡಾ ಕ್ರೂಸರ್ನಲ್ಲಿ ಕುಟುಂಬದ ಸದಸ್ಯರೊಂದಿಗೆ ಸಾಗರದ ನಡುವೆ ಜಾಲಿ ರೈಡ್ ಮಾಡುತ್ತಾ ಯಥರ್ವನ ಹುಟ್ಟುಹಬ್ಬ ಆಚರಿಸಿದ್ದಾರೆ. ರಾಧಿಕಾಗೆ ಸಮುದ್ರ ತೀರ ಎಂದರೆ ಬಹಳ ಇಷ್ಟ. ಬಹಳಷ್ಟು ಸಂದರ್ಶನಗಳಲ್ಲಿ ಯಶ್ ಇದನ್ನು ಹೇಳಿದ್ದಾರೆ. ಅದರಲ್ಲೂ ಗೋವಾ ಅಂದರೆ ರಾಧಿಕಾಗೆ ಮತ್ತಷ್ಟು ಖುಷಿ. ಅದಕ್ಕೆ ಕಾರಣ ರಾಧಿಕಾ ತಾಯಿ ಗೋವಾ ಮೂಲದವರು. ಈ ಕಾರಣದಿಂದ ಈ ಹುಟ್ಟುಹಬ್ಬ ನಟಿ ರಾಧಿಕಾ ಅವರ ಆಸೆಯಂತೆ ನಡೆದಿದೆ ಎನ್ನಬಹುದು. ಇದೇ ಕಾರಣದಿಂದ ತಮ್ಮ ನಿಶ್ಚಿತಾರ್ಥವನ್ನು ಕೂಡಾ ಈ ಜೋಡಿ ಗೋವಾದಲ್ಲೇ ಮಾಡಿಕೊಂಡಿದ್ದರು.

ಮಗನ ಹುಟ್ಟುಹಬ್ಬದ ವಿಡಿಯೋವನ್ನು ಯಶ್ ಹಾಗೂ ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹುಟ್ಟುಹಬ್ಬದ ಸಮಾರಂಭದಲ್ಲಿ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದರು. ಕಳೆದ ವರ್ಷ ಪುತ್ರಿ ಐರಾ ಹುಟ್ಟುಹಬ್ಬವನ್ನು ಈ ದಂಪತಿ ಸಿನಿಮಾ ಗಣ್ಯರನ್ನು ಆಹ್ವಾನಿಸಿ ಆಚರಿಸಿದ್ದರು. ಆದರೆ ಈ ಬಾರಿ ಮಗನ ಅದ್ಧೂರಿ ಹುಟ್ಟುಹಬ್ಬಕ್ಕೆ ಕೊರೊನಾ ಅಡ್ಡಿಯಾಗಿರುವ ಕಾರಣ ಸರಳವಾಗಿ ಬರ್ತ್ಡೇ ಆಚರಿಸಲಾಗಿದೆ.