ಸೋಮವಾರವಷ್ಟೇ ನಿಧನರಾದ 'ಕೋಟಿ ನಿರ್ಮಾಪಕ' ಎಂದೇ ಖ್ಯಾತರಾಗಿದ್ದ ರಾಮು, ಇತ್ತೀಚಿನ ದಿನಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದು ಕಡಿಮೆಯೇ. ಹಿಂದೊಮ್ಮೆ ವರ್ಷಕ್ಕೆ ಎರಡ್ಮೂರು ಚಿತ್ರಗಳನ್ನು ನಿರ್ಮಿಸುತ್ತಿದ್ದ ರಾಮು, ಕಳೆದ ಒಂದು ದಶಕದಲ್ಲಿ ನಿರ್ಮಿಸಿದ್ದು 10 ಚಿತ್ರಗಳನ್ನು ಮಾತ್ರ. ಅಷ್ಟೊಂದು ಸಂಖ್ಯೆಯ ಚಿತ್ರಗಳನ್ನು ನಿರ್ಮಿಸಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಕಡಿಮೆ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಬರುವುದು ಸಹಜವೇ.
ಗಾಂಧಿನಗರದ ಮೂಲಗಳ ಪ್ರಕಾರ, ರಾಮು ಚಿತ್ರ ನಿರ್ಮಾಣ ಕಡಿಮೆ ಮಾಡಿದ್ದಕ್ಕೆ ಪ್ರಮುಖ ಕಾರಣವೆಂದರೆ ಸೋಲು. 2010ಕ್ಕಿಂತ ಮುನ್ನ ರಾಮು ಒಂದರ ಹಿಂದೊಂದರಂತೆ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದರು. ಅದರಲ್ಲೂ ಅವರು ಹೆಚ್ಚು ನಿರ್ಮಿಸಿದ್ದು ತಮ್ಮ ಪತ್ನಿ ಮಾಲಾಶ್ರೀ ಅಭಿನಯದ ಚಿತ್ರಗಳನ್ನೇ. ರಾಮು ಮತ್ತು ಮಾಲಾಶ್ರೀ ಅವರು 'ಮುತ್ತಿನಂತ ಹೆಂಡ್ತಿ' ಚಿತ್ರದ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾದರು. ನಂತರದ ವರ್ಷಗಳಲ್ಲಿ ಮಾಲಾಶ್ರೀ ಅಭಿನಯದಲ್ಲಿ ‘ಹಲೋ ಸಿಸ್ಟರ್’, ‘ಸಿಬಿಐ ದುರ್ಗಾ’, ‘ಲೇಡಿ ಕಮಿಷನರ್’, ‘ಚಾಮುಂಡಿ’, ‘ದುರ್ಗಿ’,‘ಕನ್ನಡದ ಕಿರಣ್ ಬೇಡಿ’, ‘ವೀರ’, ‘ಎಲೆಕ್ಷನ್’, ‘ಗಂಗಾ’ ಮುಂತಾದ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.
ಈ ಚಿತ್ರಗಳ ಪೈಕಿ ಸೂಪರ್ ಸಕ್ಸಸ್ ಎನ್ನುವಂತಹ ಸಿನಿಮಾ ಯಾವುದೂ ಇಲ್ಲ. ಈ ಪೈಕಿ ಕೆಲವು ಆಕ್ಷನ್ ಚಿತ್ರಗಳಿಗೆ ಕೋಟಿಕೋಟಿ ಖರ್ಚು ಮಾಡಿದ್ದರು ರಾಮು. ಆದರೆ, ಅದರಿಂದ ಅವರಿಗೆ ನಿರೀಕ್ಷಿತ ಹಣ ಮತ್ತು ಯಶಸ್ಸು ಎರಡೂ ಸಿಗಲಿಲ್ಲ. ಇದರಿಂದಾಗಿ ಅವರ ಸಾಲದ ಹೊರೆಯೂ ಜಾಸ್ತಿಯಾಯಿತು. ಹಾಗಂತ ರಾಮು ಚಿತ್ರರಂಗ ಬಿಡಲಿಲ್ಲ ಅಥವಾ ಚಿತ್ರರಂಗದ ಬಗ್ಗೆ ಎಲ್ಲೂ ಕೆಟ್ಟ ಮಾತುಗಳನ್ನು ಆಡಲಿಲ್ಲ. ಇಲ್ಲೇ ಇದ್ದರು. ಅನುಕೂಲವಾದಾಗ ಮಾತ್ರ ಚಿತ್ರಗಳನ್ನು ನಿರ್ಮಿಸಿದರು. ಹಾಗಾಗಿಯೇ, ಈ ಒಂದು ದಶಕದಲ್ಲಿ ಅವರು ನಿರ್ಮಿಸಿದ ಚಿತ್ರಗಳಲ್ಲಿ ಗಣನೀಯ ಇಳಿಕೆ ಕಂಡಿತು. ಆದರೆ, ಇನ್ನು ಮುಂದೆ ರಾಮು ಎಂಟರ್ಪ್ರೈಸಸ್ನಿಂದ ಚಿತ್ರ ನಿರ್ಮಾಣ ಮುಂದುವರೆಯುತ್ತದೆಯೋ, ಇಲ್ಲವೋ ಎಂಬ ಪ್ರಶ್ನೆಯನ್ನು ಮುಂದಿಟ್ಟು ಅವರು ಇನ್ನಿಲ್ಲವಾಗಿದ್ದಾರೆ.