ಡಾ. ರಾಜ್‍ಕುಮಾರ್ ಮೊಮ್ಮಗ ಯುವ ರಾಜ್‍ಕುಮಾರ್ ಅಭಿನಯದ 'ಯುವ ರಣಧೀರ ಕಂಠೀರವ' ಚಿತ್ರದ ನಾಯಕನ ಲಾಂಚಿಂಗ್ ವಿಡಿಯೋ ಮತ್ತು ಚಿತ್ರದ ಟೈಟಲ್ ನವೆಂಬರ್1 ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ಸಿನಿಮಾ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಚಿತ್ರತಂಡ ಇದಕ್ಕೆ ಬೇಕಾದ ತಯಾರಿಗಳನ್ನು ಸದ್ದಿಲ್ಲದೆ ಮಾಡಿಕೊಳ್ಳುತ್ತಿದೆ.
ಈ ಮಧ್ಯೆ 'ಯುವ ರಣಧೀರ ಕಂಠೀರವ' ಚಿತ್ರವನ್ನು ಯಾರು ನಿರ್ಮಿಸುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಡಾ. ರಾಜ್ ಅಭಿಮಾನಿಗಳ ತಲೆಯನ್ನು ಕೊರೆಯುತ್ತಿದೆ. ಏಕೆಂದರೆ ಚಿತ್ರದ ಘೋಷಣೆಯಾದಾಗಿನಿಂದ ಚಿತ್ರದ ನಿರ್ದೇಶಕ ಪುನೀತ್ ರುದ್ರನಾಗ್ ಹಾಗೂ ತಾಂತ್ರಿಕ ತಂಡವನ್ನು ಪರಿಚಯಿಸಲಾಗಿದೆಯಾದರೂ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಯಾರು ಎಂಬುದು ಮಾತ್ರ ತಿಳಿದು ಬಂದಿಲ್ಲ.ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್ನಲ್ಲೂ ನಿರ್ಮಾಪಕರ ಹೆಸರಿಲ್ಲ. ಇದುವರೆಗೂ ಡಾ. ರಾಜ್ ಕುಟುಂಬದ ಕುಡಿಗಳೆಲ್ಲಾ ಅವರ ಹೋಂ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ಅಥವಾ ಇನ್ನಿತರ ಅಂಗಸಂಸ್ಥೆಗಳ ನಿರ್ಮಾಣದ ಚಿತ್ರಗಳ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ. ಶಿವರಾಜ್‍ಕುಮಾರ್ ,ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಮತ್ತು ವಿನಯ್ ರಾಜ್‍ಕುಮಾರ್ ಎಲ್ಲರೂ ತಮ್ಮ ಹೋಂ ಬ್ಯಾನರ್ ಮೂಲಕವೇ ಚಿತ್ರರಂಗಕ್ಕೆ ಪರಿಚಯವಾದವರು.
ಆದರೆ 'ಯುವ ರಣಧೀರ ಕಂಠೀರವ' ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸುವುದೋ ಅಥವಾ ಹೊರಗಿನ ನಿರ್ಮಾಪಕರು ನಿರ್ಮಿಸುತ್ತಾರೋ ಎಂಬ ವಿಷಯ ಇದುವರೆಗೂ ಸ್ಪಷ್ಟವಾಗಿಲ್ಲ. ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದ್ದರೆ, ಪೋಸ್ಟರ್ಗಳಲ್ಲಿ ಹೆಸರು ಇರಬೇಕಿತ್ತು. ಆದರೆ, ಪೋಸ್ಟರ್ನಲ್ಲಿ ನಿರ್ಮಾಪಕರ ಹೆಸರು ಇಲ್ಲದಿರುವುದು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾದರೆ 'ಯುವ ರಣಧೀರ ಕಂಠೀರವ' ಚಿತ್ರವನ್ನು ನಿರ್ಮಿಸುತ್ತಿರುವವರು ಯಾರು...? ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.